ಸಾರಾಂಶ
ಹುಬ್ಬಳ್ಳಿ:
ಜಿಲ್ಲೆಯಲ್ಲಿರುವ ಹಾಗೂ ಗಡಿಪಾರಾದ ರೌಡಿಗಳ ಮೇಲೆ ಹದ್ದಿನ ಕಣ್ಣಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗಡಿಪಾರಾದವರು ಕಾನೂನು ಉಲ್ಲಂಘಿಸಿ ಗಡಿಪ್ರವೇಶಿಸಿದ್ದೇ ಆದಲ್ಲಿ ಅಂಥವರ ಮೇಲೆ ಗೂಂಡಾ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಮಹಾನಗರದಲ್ಲಿ ಸಾರ್ವಜನಿಕರಲ್ಲಿ ಭಯ ಉಂಟುಮಾಡುತ್ತಿದ್ದ ಕೆಲ ರೌಡಿಗಳಿಗೆ ಈಗಾಗಲೇ ಗಡಿಪಾರು ಮಾಡುವ ಮೂಲಕ ಶಿಕ್ಷೆ ನೀಡಲಾಗಿದ್ದು, ಶಾಶ್ವತವಾಗಿ ಗಡಿಪಾರು ಮಾಡಲು ಬರುವುದಿಲ್ಲ. 6 ತಿಂಗಳು ಇಲ್ಲವೇ ಒಂದು ವರ್ಷದ ವರೆಗೆ ಗಡಿಪಾರು ಮಾಡಲು ಅವಕಾಶವಿದೆ ಎಂದರು. ಅವಧಿ ಪೂರ್ಣಗೊಂಡ ನಂತರ ಮತ್ತೆ ನಗರಕ್ಕೆ ಬಂದು ವಾಸಿಸುತ್ತಾರೆ. ಅಂತಹವರ ಮೇಲೂ ಹದ್ದಿನ ಕಣ್ಣಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಹಾನಗರಕ್ಕೆ ಹೊಸ ಆಯುಕ್ತರು ಬಂದ ನಂತರ ಈಗಾಗಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ:ಬೆಳಗಾವಿ, ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಪ್ರತಿ ವರ್ಷ ಗಣೇಶ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಹಾಗೆಯೇ ಹು-ಧಾ ಮಹಾ ನಗರದಲ್ಲಿ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ನಿಯೋಜಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಲಾಗಿದೆ. ಅದಕ್ಕೆ ಪೂರಕವಾಗಿ ಹಬ್ಬದ ಮುನ್ನಾ ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರದ ಕೆಲ ಸಲಹೆ, ಸೂಚನೆ ನೀಡಲಾಗುತ್ತದೆ ಎಂದರು.
ಪಾಲಿಕೆಗೆ ಬಿಟ್ಟ ವಿಷಯ:ಹುಬ್ಬಳ್ಳಿಯ ಈದ್ಗಾ ಮೈದಾನವು ಪಾಲಿಕೆಗೆ ಸಂಬಂಧಿಸಿದ ಆಸ್ತಿಯಾಗಿದ್ದು, ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದು, ಬಿಡುವುದು ಪಾಲಿಕೆ ಆಯುಕ್ತರಿಗೆ ಬಿಟ್ಟ ವಿಷಯವಾಗಿದೆ. ಅವರಿಂದ ಏನು ತೀರ್ಮಾನ ಆಗುತ್ತದೆಯೋ ಅದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ನೀಡಬೇಕಾದ ಅಗತ್ಯ ರಕ್ಷಣೆ ನೀಡಲಾಗುವುದು. ನಮ್ಮ ಇಲಾಖೆ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರ ವಹಿಸುವ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳೊಂದಿಗೆ ಸಭೆ:ನವನಗರದಲ್ಲಿರುವ ಹು-ಧಾ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಸಭೆ ನಡೆಸಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಮುಂಬರುವ ಗೌರಿಗಣೇಶ ಹಬ್ಬ, ಈದ್‌ಮಿಲಾದ್ ಹಬ್ಬದ ವೇಳೆ ಕೈಗೊಳ್ಳಬೇಕಾದ ಅಗತ್ಯ ಬಂದೋಬಸ್ತ್ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಣೇಶೋತ್ಸವ, ಈದ್ ಮಿಲಾದ್ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತಿಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಹಾಗೂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.