ಡಿಜಿಟಲ್‌ ವ್ಯವಹಾರದ ಮೇಲೂ ಹದ್ದಿನ ಕಣ್ಣು!

| Published : Mar 29 2024, 12:47 AM IST

ಸಾರಾಂಶ

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಣ, ಆಮೀಷಗಳಿಂದ ಮತಗಳು ಸೆಳೆಯುವುದು ಸಹಜ. ಕೈಯಿಂದ ಕೈಗೆ ಹಣ ವರ್ಗಾವಣೆ ಮಾತ್ರವಲ್ಲದೇ ಫೋನ್‌ ಪೇ, ಗೂಗಲ್‌ ಪೇ, ಯುಪಿಐ, ಆರ್‌ಟಿಜಿಎಸ್‌ ಅಥವಾ ಇತರೆ ಮಾರ್ಗಗಳ ಮೂಲಕ ಡಿಜಿಟಲ್‌ ವ್ಯವಹಾರ ಮಾಡುವ ಅನುಮಾನ.

ಬಸವರಾಜ ಹಿರೇಮಠ

ಧಾರವಾಡ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ, ಮದ್ಯ ಸೇರಿದಂತೆ ಮತದಾರರಿಗೆ ಆಮಿಷ ಒಡ್ಡುವ ಯಾವುದೇ ವಸ್ತುಗಳ ಸಂಚಾರ ತಗ್ಗಿಸಲು ಈಗಾಗಲೇ ಜಿಲ್ಲೆಯ ಗಡಿಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ ಪರಿಶೀಲಿಸಲಾಗುತ್ತಿದೆ. ಬರೀ ಭೌತಿಕವಾಗಿ ಮಾತ್ರ ಅಕ್ರಮ ನಡೆಯದೇ ಡಿಜಿಟಲ್‌ ಮೂಲಕವೂ ಮತದಾರರಿಗೆ ಹಣದ ಆಮೀಷ ಒಡ್ಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಡಿಜಿಟಲ್‌ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಣ, ಆಮಿಷಗಳಿಂದ ಮತಗಳು ಸೆಳೆಯುವುದು ಸಹಜ. ಕೈಯಿಂದ ಕೈಗೆ ಹಣ ವರ್ಗಾವಣೆ ಮಾತ್ರವಲ್ಲದೇ ಫೋನ್‌ ಪೇ, ಗೂಗಲ್‌ ಪೇ, ಯುಪಿಐ, ಆರ್‌ಟಿಜಿಎಸ್‌ ಅಥವಾ ಇತರೆ ಮಾರ್ಗಗಳ ಮೂಲಕ ಡಿಜಿಟಲ್‌ ವ್ಯವಹಾರ ಮಾಡಿದರೆ ಯಾರಿಗೂ ತಿಳಿಯೋದಿಲ್ಲ ಎಂದ ಅಭ್ಯರ್ಥಿಗಳು ವಿನೂತನ ಮಾರ್ಗ ಅನುಸರಿಸುವ ಸಾಧ್ಯತೆಗಳವೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಇದಕ್ಕೂ ಕೊಕ್ಕೆ ಹಾಕಿದೆ. ಅಭ್ಯರ್ಥಿಗಳು ಇಂತಹ ಯೋಚನೆ ಮೂಲಕ ಚಾಪೆ ಕೆಳಗೆ ನುಸುಳಿದರೆ, ಚುನಾವಣಾ ಆಯೋಗ ರಂಗೋಲಿ ಕೆಳಗೆ ನುಸುಳಿದೆ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸುವ ಉದ್ದೇಶದಿಂದ ಸಂಶಯಾಸ್ಪದ ವ್ಯಕ್ತಿಗಳು ನಡೆಸುವ ಆನ್‌ಲೈನ್ ವಹಿವಾಟಿನ ಮೇಲೆ ನಿಗಾ ಇರಿಸಿ, ಅಭ್ಯರ್ಥಿಗಳಿಗೆ ಆಯೋಗ ಶಾಕ್ ನೀಡಿದೆ.

ವಹಿವಾಟು ಮೇಲೆ ಕಣ್ಣು:

ಈಗಾಗಲೇ ಚುನಾವಣಾ ಆಯೋಗವು ಹತ್ತು ಹಲವು ತಂಡಗಳ ಮೂಲಕ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕಿದ್ದು, ದಾಖಲೆ ಇಲ್ಲದ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪ್ರತ್ಯೇಕ ತಂಡವೊಂದನ್ನು ರಚಿಸಿದ ಚುನಾವಣಾ ಆಯೋಗ ಆನ್‌ಲೈನ್ ವಹಿವಾಟಿನ ಮೇಲೆ ತೀವ್ರ ನಿಗಾ ವಹಿಸಿದೆ. ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಸಂಸ್ಥೆಗಳು, ಬ್ಯಾಂಕ್‌ ಅಧಿಕಾರಿಗಳ ಜತೆ ಸಭೆ ಮಾಡಿ, ಚರ್ಚಿಸಿ ದಿನದ ವಹಿವಾಟು, ಯಾವುದೇ ವ್ಯಕ್ತಿಯಿಂದ ನಿರ್ದಿಷ್ಟ ಮೊತ್ತದ ಹಣ ಜನರಿಗೆ ರವಾನೆ ಮಾಡಿದರೆ, ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಆಯೋಗವು ಮುಂದಾಗಿದೆ.

ಒಟ್ಟಾರೆ ಚುನಾವಣಾ ಆಯೋಗ ಡಿಜಿಟಲ್ ವಹಿವಾಟಿನ ಮೇಲೂ ಸಹ ಹದ್ದಿನ ಕಣ್ಣಿಟ್ಟಿದೆ. ಅನುಮಾನ ಬಂದ ಅಕೌಂಟ್‌ಗಳ ಮೇಲೆ ತನಿಖೆ ನಡೆಸಲು ಯೋಜನೆ ರೂಪಿಸಿದೆ. ಇದೀಗ ಧಾರವಾಡ ಕ್ಷೇತ್ರದಲ್ಲಿ ಚುನಾವಣಾ ಕಾವು ಶುರುವಾಗಿದ್ದು ಇಲ್ಲಿಯ ವರೆಗೂ ಯಾವುದೇ ಅಂತಹ ಪ್ರಕರಣಗಳು ದಾಖಲಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಆದ್ದರಿಂದ ಡಿಜಿಟಲ್ ವಹಿವಾಟಿನ ಮೇಲೂ ಕಣ್ಣಿಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಸಂಶಯಾಸ್ಪದ ಅಕೌಂಟ್‌, ವ್ಯಕ್ತಿಗಳ ಮೇಲೆ ಕಣ್ಣಿಟ್ಟಿದ್ದು ಅಕ್ರಮವಾಗಿ ಡಿಜಿಟಲ್‌ ವ್ಯವಹಾರ ನಡೆಸಿದ್ದೇ ಆದರೆ ಕ್ರಮ ನಿಶ್ಚಿತ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.