ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
12 ಗ್ರಾಮಗಳ 30 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ 5ಎ- 5ಬಿ ಏತ ನೀರಾವರಿ ಯೋಜನೆ ಹಾಗೂ ಬಬಲೇಶ್ವರ ವಿತರಣಾ ಕಾಲುವೆ ನಂ.15ರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಆರ್‌ಐಡಿಎಲ್ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಆರ್‌ಐಡಿಎಫ್ ಯೋಜನೆಯಡಿ ರೈತ ಸಂಪರ್ಕ ಕೇಂದ್ರದಲ್ಲಿ ಗೋದಾಮು ಕಟ್ಟಡ ಉದ್ಘಾಟನೆ, ಪಟ್ಟಣ ಪಂಚಾಯತಿ ವತಿಯಿಂದ ₹ 2.64 ಕೋಟಿ ವೆಚ್ಚದಲ್ಲಿ ವಿವಿಧ 9 ಕಾಮಗಾರಿಗಳ ಭೂಮಿಪೂಜೆ, ಬಬಲೇಶ್ವರ ತಾಪಂ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ 45 ಹೊಲಿಗೆ ಯಂತ್ರಗಳ ವಿತರಣೆ, ಆರೋಗ್ಯ ಇಲಾಖೆಯ ₹ 2.50 ಕೋಟಿ ವೆಚ್ಚದಲ್ಲಿ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಂಕುಸ್ಥಾಪನೆ, ಸಮಾಜ ಕಲ್ಯಾಣ ಇಲಾಖೆಯ ₹ 17 ಕೋಟಿ ವೆಚ್ಚದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಶಂಕುಸ್ಥಾಪನೆ, ಕಂದಾಯ ಇಲಾಖೆಯ ಬಬಲೇಶ್ವರ ತಾಲೂಕಿನ ಭೂಮಾಪನ ಕಚೇರಿ ಉದ್ಘಾಟನೆ, ಬಬಲೇಶ್ವರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರ ಕಚೇರಿ ಉದ್ಘಾಟಿಸಿ ಮಾತನಾಡಿದರು. ಅರ್ಜುಣಗಿ, ಕುಮಠೆ, ತೊದಲಬಾಗಿ, ಹೆಬ್ಬಾಳಟ್ಟಿ, ತಿಗಣಿಬಿದರಿ, ನಾಗರಾಳ, ಗದ್ಯಾಳ, ಗೋಠೆ, ಯಕ್ಕುಂಡಿ, ವಕ್ಕುಂಡಿ, ನಿಡೋಣಿ, ಶೇಗುಣಸಿ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.
ಜಿಲ್ಲೆಯಲ್ಲಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ಸ್ಮಾರ್ಟಕ್ಲಾಸ್, ಆಟದ ಪರಿಕರಗಳ ವ್ಯವಸ್ಥೆ ಸೇರಿದಂತೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಸಮರ್ಪಕ ವಾತಾವರಣ ಮಕ್ಕಳಿಗೆ ಕಲ್ಪಿಸಿಕೊಂಡು ಪ್ರೋತ್ಸಾಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.ಬಬಲೇಶ್ವರ- ತಿಕೋಟಾ ಭಾಗದ ಅತ್ಯಂತ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಡಿ ಒಂದು ಸಾವಿರ ಮನೆಗಳನ್ನು ನಿರ್ಮಾಣ ಮಾಡಿ ಗ್ರಾಮ ಸಭೆಗಳ ಮೂಲಕ ಹಂಚಲಾಗುವುದು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರು ಸಹಕರಿಸಬೇಕು. ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ಬೇಸಿಗೆ ಸಮಯದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಯೋಜನೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿ 8 ತಾಲೂಕುಗಳನ್ನು ಹೊಸದಾಗಿ ರಚನೆ ಮಾಡಲಾಗಿದ್ದು, ತಿಕೋಟಾ ಮತ್ತು ಬಬಲೇಶ್ವರ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿಸುವ ನಿಟ್ಟಿನಲ್ಲಿ ಸಚಿವರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಇಂದು ಬಬಲೇಶ್ವರ ತಾಲೂಕಿನಲ್ಲಿ ಭೂಮಾಪನ ಕಚೇರಿ ಆರಂಭದಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿದೆ. ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವುದು ತಪ್ಪಿದಂತಾಗಿದೆ. ಇದೇ ಮಾದರಿಯಲ್ಲಿ ಉಳಿದ 6 ತಾಲೂಕುಗಳಲ್ಲಿ ಹಂತ ಹಂತವಾಗಿ ಕಾರ್ಯಾರಂಭ ಮಾಡಲಾಗುವುದು. ಜಿಲ್ಲೆಯಲ್ಲಿ ಗ್ರಾಪಂ ಮಟ್ಟದಿಂದಲೇ ಅರಣ್ಯೀಕರಣಕ್ಕೆ ಒತ್ತು ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.ಡಾ.ಮಹಾದೇವ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು. ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ಜಿಪಂ ಸಿಇಒ ರಿಷಿ ಆನಂದ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಕೋಟ್‌ವಿಶೇಷವಾಗಿ ಬಬಲೇಶ್ವರ ಮತ್ತು ತಿಕೋಟಾ ಭಾಗದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಸಂತೃಪ್ತಿ ನನಗಿದೆ. ಬರದ ನಾಡನ್ನು ನೀರಾವರಿಗೊಳಪಡಿಸಿ ಜಿಲ್ಲೆಯ ಇತಿಹಾಸ ಬದಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಇಂಡಿ ತಾಲೂಕಿನ 25 ಕೆರೆಗಳಿಗೆ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಜಿಲ್ಲೆಯ ಹಳ್ಳಗಳನ್ನು ತುಂಬಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಲಾಗುವುದು.ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ