ಕೃಷ್ಣಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಸಿ: ಹಣಮಂತ ನಿರಾಣಿ

| Published : Mar 02 2024, 01:49 AM IST

ಕೃಷ್ಣಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಗೊಳಿಸಿ: ಹಣಮಂತ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯನ್ನು ಎರಡು ಹಂತಗಳಲ್ಲಿ ಮಾಡಲು ರಾಜ್ಯ ಸರ್ಕಾರ ಹೊರಟಿರುವುದು ವಿಳಂಬಕ್ಕೆ ಕಾರಣವಾಗಲಿದೆ. ಒಂದೇ ಹಂತದಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಪರಿಷತ್‌ ಸದನದಲ್ಲಿ ವಿಪ ಸದಸ್ಯ ಹಣಮಂತ ಆರ್. ನಿರಾಣಿ ಆಗ್ರಹಿಸಿದ್ದಾರೆ.

ಕನ್ನಡ ಪ್ರಭ ವಾರ್ತೆ ಮುಧೋಳ

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯನ್ನು ಎರಡು ಹಂತಗಳಲ್ಲಿ ಮಾಡಲು ರಾಜ್ಯ ಸರ್ಕಾರ ಹೊರಟಿರುವುದು ವಿಳಂಬಕ್ಕೆ ಕಾರಣವಾಗಲಿದೆ. ಒಂದೇ ಹಂತದಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು. ಇದರಿಂದ ವ್ಯರ್ಥವಾಗಿ ಹರಿದು ಹೋಗುವ 130 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ರಾಜ್ಯದ ರೈತರಿಗೆ ಅನುಕೂಲವಾಗುವುದು ಎಂದು ಪರಿಷತ್‌ ಸದನದಲ್ಲಿ ವಿಪ ಸದಸ್ಯ ಹಣಮಂತ ಆರ್. ನಿರಾಣಿ ಆಗ್ರಹಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರದ ಅತ್ಯಂತ ದೊಡ್ಡ ನೀರಾವರಿ ಯೋಜನೆ. ಈ ಯೋಜನೆಯಲ್ಲಿ ಮನೆ, ಮಠ, ಭೂಮಿ, ತಮ್ಮ ಊರಿನೊಂದಿಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧ ಕಡಿದುಕೊಂಡ ಸಂತ್ರಸ್ತರ ತ್ಯಾಗ ನಮ್ಮ ಯೋಧರ ತ್ಯಾಗಕ್ಕೆ ಸಮಾನವಾಗಿದೆ, ಅವರಿಗೆ ಪೂರ್ಣ ಪ್ರಮಾಣದಲ್ಲಿ ಯೋಗ್ಯ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮೂರನೇ ಹಂತದ ಎತ್ತರ ಹೆಚ್ಚಿಸುವ ಯೋಜನೆಯಲ್ಲಿ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ 20 ಗ್ರಾಮಗಳು ಹೊಸದಾಗಿ ಮುಳುಗಲಿವೆ. ಈ ಗ್ರಾಮಸ್ಥರಿಗೆ ನೋಟೀಸ್ ಕೊಡಲಾಗಿದೆ. ಆದರೆ ಪುನರ್ವಸತಿ ಕಾರ್ಯ ಆರಂಭವಾಗಿಲ್ಲ. ಈ ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಿ ಪುನರ್ವವಸತಿಗೆ ವ್ಯವಸ್ಥೆ ಮಾಡಬೇಕೆಂದು ಆಗ್ರಹ ಪಡಿಸಿದರು.