ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮುಂಗಾರು ಮಳೆ ಇಳಿಮುಖವಾಗಿದ್ದು, ಬತ್ತದ ಕೃಷಿ ಮಾಡುವ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಲ್ಲೇ ಶೇ.22ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ರೈತರು ತೀವ್ರ ನಿರಾಸೆಗೆ ಒಳಗಾಗಿದ್ದಾರೆ.
ಜೂನ್ ತಿಂಗಳ ಆರಂಭದಲ್ಲಿ ಒಂದು ವಾರಗಳ ಕಾಲ ಉತ್ತಮ ಮಳೆಯಾಗಿ ರೈತರಿಗೆ ಖುಷಿ ನೀಡಿದ್ದ ಮಳೆ ಈಗ ಸಂಪೂರ್ಣ ಬಿಡುವು ಕೊಟ್ಟಿದೆ. ಕೆಲ ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಬಿಸಿಲಿನ ವಾತಾವರಣ ಕಂಡುಬಂದಿರುವ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಮಾತ್ರ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಕೃಷಿಯನ್ನು ಮಾಡಲಾಗುತ್ತಿದೆ. ಆದರೆ ಪ್ರತಿ ಬಾರಿಯೂ ಹವಾಮಾನ ವೈಪರೀತ್ಯದ ಪರಿಣಾಮದಿಂದ ಬತ್ತ ಬೆಳೆಯುವ ರೈತರಿಗೆ ಸಮಸ್ಯೆ ಉಂಟಾಗುತ್ತಿದೆ.
ಜೂನ್ ತಿಂಗಳ ಆರಂಭದಲ್ಲಿ ಮಳೆ ಇದ್ದ ಕಾರಣ ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ಬತ್ತದ ಕೃಷಿಕರು ಕೃಷಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಪೊನ್ನಂಪೇಟೆ ತಾಲೂಕಿನ ಪ್ರಗತಿಪರ ಕೃಷಿಕ ರವಿಶಂಕರ್ ಅವರು 7 ಕ್ವಿಂಟಲ್ ಬಿತ್ತನೆ ಬೀಜವನ್ನು ಸಸಿಮಡಿಗಳಲ್ಲಿ ಹಾಕಿ ಕೃಷಿಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಬಿಸಿಲಿನಿಂದಾಗಿ ಸಸಿಮಡಿಯಲ್ಲಿ ಹಾಕಿದ್ದ ಬತ್ತದ ಬಿತ್ತನೆ ಬೀಜಗಳು ಶೇ. 30ರಷ್ಟು ಹಾಳಾಗಿದ್ದು, ಕಂಗಾಲಾಗಿದ್ದಾರೆ.ಈ ಬಾರಿ ಬಿತ್ತನೆ ಬೀಜದ ಬೆಲೆ ಏರಿಕೆ ಕೂಡ ಆಗಿದ್ದು, ಮೊದಲೇ ಹೆಚ್ಚು ಬೆಲೆಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಸಸಿಮಡಿಗೆ ಹಾಕಿದ್ದ ಬಿತ್ತನೆ ಬೀಜ ಹಾಳಾದ ಪರಿಣಾಮದಿಂದಾಗಿ ಮತ್ತೆ ಬಿತ್ತನೆ ಬೀಜವನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಕೆಲವು ಕಡೆಗಳಲ್ಲೂ ಬತ್ತದ ಕೃಷಿಗೆ ಇನ್ನೂ ಸಿದ್ಧತೆ ಮಾಡಲಾಗಿಲ್ಲ. ಜಿಲ್ಲೆಯ ಭಾಗಮಂಡಲ ಸೇರಿದಂತೆ ಕೆಲವು ಕಡೆಗಳಲ್ಲಿ ಉಳುಮೆ ಕಾರ್ಯ ಮಾಡಲಾಗಿಲ್ಲ. ಜೂನ್ ತಿಂಗಳ ಅಂತ್ಯ ಅಥವಾ ಜುಲೈ ತಿಂಗಳ ಆರಂಭದಲ್ಲಿ ಸಿದ್ಧತೆ ಮಾಡುವ ಸಾಧ್ಯತೆಯಿದೆ.ಜಿಲ್ಲೆಯಲ್ಲಿ 32,570 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಹಾಗೂ ಮುಸುಕಿನ ಜೋಳ ಗುರಿ ಹೊಂದಲಾಗಿದೆ. 1,913 ಕ್ವಿಂಟಾಲ್ ವಿವಿಧ ತಳಿಯ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಈಗಾಗಲೇ 570 ಕ್ವಿಂಟಾಲ್ ರೈತರಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗೆ ಪೂರಕವಾಗಲಿದೆ ಎಂದು ಕೃಷಿಕರ ಆಶಯವಾಗಿದೆ.
ಜೂನ್ ನಲ್ಲಿ ಶೇ.22ರಷ್ಟು ಮಳೆ ಕೊರತೆ: ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯ ವರೆಗೆ ಉತ್ತಮ ಮಳೆಯಾಗಿದೆ. ವಾಡಿಕೆಗಿಂತ ಶೇ.5ರಷ್ಟು ಹೆಚ್ಚಾಗಿಯೇ ಇದೆ. ಆದರೆ ಜೂನ್ ತಿಂಗಳಲ್ಲಿ ಆರಂಭದಲ್ಲಿ ಉತ್ತಮ ಮಳೆ ಇತ್ತು. ನಂತರ ಮಳೆ ಕೊಂಚ ಕುಂಠಿತಗೊಂಡು ಶೇ.22ರಷ್ಟು ಕಡಿಮೆಯಾಗಿದೆ. ಮುಂಗಾರು ಆರಂಭದಲ್ಲಿ ಮಳೆ ದುರ್ಬಲಗೊಂಡಿರುವುದು ರೈತರಲ್ಲಿ ನಿರಾಸೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ.ಜೂನ್ ಆರಂಭದಲ್ಲಿ ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ಸಸಿಮಡಿಯಲ್ಲಿ 7 ಕ್ವಿಂಟಾಲ್ ಬಿತ್ತನೆ ಬೀಜವನ್ನು ಹಾಕಲಾಗಿತ್ತು. ಆದರೆ ಸತತವಾಗಿ ಮೂರು ದಿನ ಬಿಸಿಲು ಬಂದ ಕಾರಣ ನೀರಿಲ್ಲದೆ ಶೇ.30ರಷ್ಟು ಬಿತ್ತನೆ ಬೀಜ ಹಾಳಾಗಿದೆ. ಮತ್ತೊಂದು ಕಡೆ ಪ್ರಾಣಿ, ಪಕ್ಷಿಗಳಿಂದಲೂ ಬಿತ್ತನೆ ಬೀಜ ಹಾಳಾಗಿದೆ ಎಂದು ಪೊನ್ನಂಪೇಟೆ ಕೃಷಿಕರು ರವಿ ಶಂಕರ್ ಹೇಳಿದರು.
ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ಸ್ವಲ್ಪ ಕುಂಠಿತಗೊಂಡಿದೆ. ಜೂನ್ ನಲ್ಲಿ ಶೇ.22ರಷ್ಟು ಮಳೆ ಕೊರತೆಯಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ 32,570 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಹಾಗೂ ಮುಸುಕಿನ ಜೋಳ ಗುರಿ ಹೊಂದಲಾಗಿದೆ. 1,913 ಕ್ವಿಂಟಾಲ್ ವಿವಿಧ ತಳಿಯ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಈಗಾಗಲೇ 570 ಕ್ವಿಂಟಾಲ್ ರೈತರಿಗೆ ನೀಡಲಾಗಿದೆ. ಜೂನ್ ತಿಂಗಳ ಅಂತ್ಯದಿಂದ ಆಗಸ್ಟ್ ತಿಂಗಳ ವರೆಗೆ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಮಡಿಕೇರಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್ ಹೇಳಿದರು.