ಮುಂಜಾನೆ ಅಪಘಾತ: ತಕ್ಷಣವೇ ಸಿಗದ ನೆರವು

| Published : Jan 23 2025, 12:46 AM IST

ಸಾರಾಂಶ

ತರಕಾರಿ - ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ ಗಾಯಾಳುಗಳಿಗೆ ತಕ್ಷಣವೇ ನೆರವು ಸಿಗಲಿಲ್ಲ. ಮುಂಜಾನೆಯೇ ಘಟನೆ ನಡೆದಿದ್ದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಗಾಯಾಳುಗಳು ನೆರವಿಗಾಗಿ ಪರದಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ತರಕಾರಿ - ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ ಗಾಯಾಳುಗಳಿಗೆ ತಕ್ಷಣವೇ ನೆರವು ಸಿಗಲಿಲ್ಲ. ಮುಂಜಾನೆಯೇ ಘಟನೆ ನಡೆದಿದ್ದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಗಾಯಾಳುಗಳು ನೆರವಿಗಾಗಿ ಪರದಾಡಿದ್ದಾರೆ.

ಅಪಘಾತವು ಮುಂಜಾನೆ ಸುಮಾರು 4 ಗಂಟೆಗೆ ನಡೆದಿದೆ. ಆ ಹೊತ್ತಿನಲ್ಲಿ ಯಾರೂ ಕೂಡ ಅದೇ ರಸ್ತೆಯಲ್ಲಿ ಸಂಚರಿಸಿಲ್ಲ. 5.30ರ ಸುಮಾರಿಗೆ ಮಂಗಳೂರಿಗೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗುಳ್ಳಾಪುರ ಬಳಿ ತರಕಾರಿ ಲಾರಿ ಉರುಳಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಅಲರ್ಟ್ ಆಗಿ ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಟ್ರಕ್ ಅಡಿಯಿಂದ ಕೆಲವರು ಹೊರಬಂದಿದ್ದರು. ಲಾರಿ ಅಡಿಯಲ್ಲಿ ಕೆಲವರು ಸಿಲುಕಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಕ್ರೇನ್ ತರಿಸಿ ಟ್ರಕ್ ಮೇಲಕ್ಕೆ ಎಳೆದಾಗ ಅಡಿಯಲ್ಲಿ 8 ಜನರು ಮೃತಪಟ್ಟಿರುವುದು ಕಂಡುಬಂತು.ಸಾವಿನಿಂದ ಪಾರಾದ ಅಣ್ಣ,

ಜೀವ ಕಳೆದುಕೊಂಡ ತಮ್ಮ

ಕಾರವಾರ: ಪ್ರತಿ ಬಾರಿ ತಮ್ಮ ಜಲಾನಿಯೊಂದಿಗೆ ಸಂತೆಗೆ ಲಾರಿಯಲ್ಲಿ ಹೋಗುತ್ತಿದ್ದ ಸವಣೂರಿನ ಅಬ್ದುಲ್ ರೌಫ್ ಮಂಗಳವಾರ ನತದೃಷ್ಟ ಲಾರಿಯಲ್ಲಿ ಹೋಗದೆ ಬಚಾವಾಗಿದ್ದರೆ, ತಮ್ಮ ಜಲಾನಿ ಮೃತಪಟ್ಟಿರುವುದರಿಂದ ರೌಫ್ ರೋದನ ಮುಗಿಲುಮುಟ್ಟಿತ್ತು. ಕನ್ನಡಪ್ರಭದೊಂದಿಗೆ ಮಾತನಾಡಿದ ಅಬ್ದುಲ್ ರೌಫ್, ಯಾವಾಗಲೂ ತಮ್ಮನ ಜತೆ ನಾನೂ ನಿಂಬೆಹಣ್ಣು ವ್ಯಾಪಾರಕ್ಕೆ ಹೋಗುತ್ತಿದ್ದೆ. ಆದರೆ ಈ ವಾರ ಹೋಗಿರಲಿಲ್ಲ. ಆದರೆ ತಮ್ಮ ಜಿಲಾನಿ ಹೋಗಿಯೇ ಬಿಟ್ಟ ಎಂದು ರೋಧಿಸಿದರು.

ಅಪಘಾತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ:

ಸವಣೂರು: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಬಳಿ ಲಾರಿ ಪಲ್ಟಿಯಾಗಿ ಮೃತಪಟ್ಟ 10 ಜನರ ಪೈಕಿ 9 ಜನರ ಅಂತ್ಯಕ್ರಿಯೆ ಬುಧವಾರ ಸಂಜೆ ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ ನಡೆಯಿತು. ಸವಣೂರು ಪಟ್ಟಣಕ್ಕೆ ಶಾಸಕ ಯಾಸೀರಖಾನ್ ಪಠಾಣ ನೇತೃತ್ವದಲ್ಲಿ ಮೃತದೇಹಗಳನ್ನು ತರಲಾಯಿತು. ಮೃತರ ಮನೆಗಳಿಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ವಿಧಿ-ವಿಧಾನ ಪೂರೈಸಲಾಯಿತು. ನಂತರ ಮೃತದೇಹ ಈದ್ಗಾ ಮೈದಾನಕ್ಕೆ ತಂದು ಸಾಲಾಗಿ ಶವವಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಖಬರಸ್ತಾನಕ್ಕೆ ತಗೆದುಕೊಂಡು ಹೋಗಿ ದಫನ್ ಮಾಡಲಾಯಿತು. ಶಿಗ್ಗಾಂವಿ ಶಾಸಕ ಯಾಸೀರಖಾನ್ ಪಠಾಣ್ ಸೇರಿ ಹಲವು ಗಣ್ಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ತಲಾ ₹5 ಲಕ್ಷ ಪರಿಹಾರಬೆಂಗಳೂರು/ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿರುವ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಗೆ ಸಂತಾಪ ಸೂಚಿಸಿ ₹2 ಲಕ್ಷ ಪರಿಹಾರ ಘೋಷಿಸಿದರು. ಇನ್ನು ₹3 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಕೆಎಂಸಿಯಲ್ಲಿ ತುರ್ತು ಚಿಕಿತ್ಸೆಆರಂಭಿಸದ್ದಕ್ಕೆ ಜನಾಕ್ರೋಶಹುಬ್ಬಳ್ಳಿ: ಯಲ್ಲಾಪುರದ ಬಳಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ 10 ಮಂದಿಯನ್ನು ಇಲ್ಲಿನ ಕೆಎಂಸಿಆರ್‌‌ಐ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗಾಯಗೊಂಡ 11 ಮಂದಿಯನ್ನು ಬೆಳಗ್ಗೆ 6.30ಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕರೆತರಲಾಗಿತ್ತು‌. ಇವರಲ್ಲಿ ಸವಣೂರಿನ ಜಲಾಲ್ ಬಾಷಾ ಮಂಚಗಿ (27) ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಉಳಿದವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳು ಬಂದ ತಕ್ಷಣ ಚಿಕಿತ್ಸೆ ನೀಡಲು ಯಾವೊಬ್ಬ ವೈದ್ಯರೂ ಇರಲಿಲ್ಲ. ತುರ್ತು ಚಿಕಿತ್ಸೆ ಕೊಡುವುದನ್ನು ಬಿಟ್ಟು ಚೀಟಿ ಮಾಡಿಸಿಕೊಂಡು ಬನ್ನಿ, ಆಧಾರ್ ಕಾರ್ಡ್ ತೋರಿಸಿ ಎಂದು ಸಿಬ್ಬಂದಿ ಹೇಳಿದಾಗ ಗಾಯಾಳುಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಕೆಲವರು ವಾಗ್ವಾದ ನಡೆಸಿದರು. ಸೂಕ್ತ ಚಿಕಿತ್ಸೆ ಸಿಗದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಜುಬೇರ್ ಎಂಬುವರು ಎಚ್ಚರಿಕೆ ನೀಡಿದರು. ಘಟನೆಯ ಮಾಹಿತಿ ಅರಿತು ಆಸ್ಪತ್ರೆಗೆ ಭೇಟಿ ನೀಡಿದ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಗಾಯಾಳುಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಸೂಚಿಸಿದರು.