ಸಾರಾಂಶ
ಕುಕನೂರು: ಹರಿದು ಹಂಚಿ, ಪಾಲು ಮಾಡಿಕೊಳ್ಳುವ ಸಂಪತ್ತಿಗಿಂತ, ಎಲ್ಲ ಕಡೆಯೂ ಬೆಲೆ ಇರುವ ಪುಣ್ಯವೆಂಬ ಸಂಪತ್ತಿನ ನಾಣ್ಯ ಗಳಿಸಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ರಾಜೂರು ಗ್ರಾಮದಲ್ಲಿ ಜರುಗಿದ ಲಿಂ. ಪಂಚಾಕ್ಷರ ಶಿವಾಚಾರ್ಯರ ಐದನೇ ವರ್ಷದ ಪುಣ್ಯಸ್ಮರಣೆ ಹಾಗೂ ಶಿಲಾಮಂಟಪ ಲೋಕಾರ್ಪಣೆಯಲ್ಲಿ ಆಶೀರ್ವಚನ ನೀಡಿದ ಅವರು, ರಾಜೂರಲ್ಲಿ ಲಿಂ. ಪಂಚಾಕ್ಷರ ಶ್ರೀಗಳು ಪುತ್ರೋತ್ಸವ ಮಾಡಿದಷ್ಟೇ ವೈಭವವಾಗಿ ನಾಡಿನ ಸಾಹಿತಿಗಳನ್ನು ಕರೆಯಿಸಿ ಪುಸ್ತಕೋತ್ಸವ ಮಾಡುತ್ತಿದ್ದರು. ರಾಜೂರಿನ ಭಕ್ತರು ನಿರ್ಮಿಸಿರುವ ಶ್ರೀಗಳ ಗದ್ದುಗೆ, ಶಿಲಾ ಮಂಟಪ ನೋಡಿದರೆ ಸಣ್ಣ ಹಂಪಿ ನೋಡಿದ ಹಾಗೆ ಆಗುತ್ತದೆ. ದೇವರು ನೀಡಿರುವ ಜೀವನವನ್ನು ಅರ್ಪಣೆ ಮಾಡಬೇಕಾಗುತ್ತದೆ. ದೊಡ್ಡ ಮರದ ಹಾಗೇ ಸಣ್ಣ ಬಳ್ಳಿಗೂ ದೇವರು ಬದುಕುವ ಅವಕಾಶ ನೀಡಿದ್ದಾನೆ. ಬಳ್ಳಿ ದೊಡ್ಡ ಗಿಡದ ಹಾಗೇ ದೊಡ್ಡದು ನೀಡದಿದ್ದರೂ ಅದರ ಕೊಡುವ ಮನಸ್ಸಿನಿಂದ ಬಳ್ಳಿ ನೀಡಿದ ಹೂವು ದೇವರಿಗೆ ಸಮರ್ಪಣೆ ಆಗುತ್ತದೆ. ಹಾಗೆ ಮನುಷ್ಯ ಕೂಡಾ ಅರ್ಪಣಾ ಮನೋಭಾವ ತಾಳಬೇಕು ಎಂದರು.ಮನುಷ್ಯನ ಜೀವನ ಕಾಯಂ ಇರುವುದಿಲ್ಲ. ಈ ಬದುಕು ದೇವರು ನೀಡಿರುವ ಅವಕಾಶ. ಸಂತಸದಿಂದ ಬದುಕಬೇಕು. ದೇವರು ನೀಡಿದ ದೇಹ ಎಂಬ ಕೊಡುಗೆ ಸದ್ಬಳಕೆ ಆಗಬೇಕು. ನಾವೂ ಹಾಗೂ ನಮ್ಮ ಜತೆ ಇದ್ದವರು ಸಂತಸದಿಂದ ಇರಬೇಕು. ಬದುಕಿನ ಸತ್ಯ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ದೇಹ, ಸಂಪತ್ತಿನ ಮೇಲೆ ಕಣ್ಣಾಡಿಸಿದ ಜ್ಞಾನಿ ಹಾಗೂ ಋಷಿಗಳು ದೇಹವೂ, ಸಂಪತ್ತು, ಕೀರ್ತಿ, ಶಾಶ್ವತವಲ್ಲ. ಶರೀರ, ಸಂಪತ್ತು ಹೋಗುವುದೇ. ಸಾವು ಸಹ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಭೂಮಿಗೆ ನಮಗೆ ಯಾವುದೊ ಒಂದು ಶಕ್ತಿ ಕಳುಹಿಸಿದೆ. ಸಾವು ಸಹ ನಮ್ಮ ಕೈಯಲ್ಲಿ ಇಲ್ಲ. ದೇವರು ಹುಟ್ಟು ಸಾವಿನ ನಡುವಿನ ಬದುಕನ್ನು ಮಾತ್ರ ನಮ್ಮ ಉಡಿಯೋಳಗೆ ಹಾಕಿದ್ದಾನೆ. ಹಾಗಾಗಿ ಮನುಷ್ಯ ಏನೇ ಮಾಡಬೇಕಾದರೂ ಒಂದಿಷ್ಟು ಪುಣ್ಯದ ಕೆಲಸ ಮಾಡಬೇಕು. ಹರಿದು ಹಂಚಿಕೊಳ್ಳದ, ಪಾಲು ಮಾಡಿಕೊಳ್ಳದ ಬಯಲಲ್ಲಿ ಇಟ್ಟರೂ ಬೇರೆಯವರೂ ಮುಟ್ಟದ, ವಿದೇಶಕ್ಕೂ ತೆರಳಿದರೂ ಚಲಾವಣೆ ಆಗುವ ಸಂಪತ್ತು ಎಂಬ ಪುಣ್ಯದ ನಾಣ್ಯ ಗಳಿಸಬೇಕು ಎಂದರು.
ಈ ದೇಹವನ್ನು ತಂದೆ ತಾಯಿಯ ಸೇವೆ ಮಾಡುವಲ್ಲಿ ಅರ್ಪಿಸಬೇಕು. ತಾಯಿ ತನ್ನ ಮಗುವಿಗೆ ತನ್ನದೇ ದೃಷ್ಟಿ ಬೀಳಬಾರದು ಎಂದು ಯಾರಿಲ್ಲದಿದ್ದರೂ ಸೆರಗು ಹೊದೆಸಿ ಹಾಲು ಕುಡಿಸುತ್ತಾಳೆ. ತಂದೆ ಮಗುವನ್ನು ಹೆಗಲ ಮೇಲೆ ಹೊತ್ತು ತಾನು ಕಾಣದ ಜಗತ್ತು ಕಾಣಲೆಂದು ಆಶಿಸುತ್ತಾನೆ. ನಮಗಾಗಿ ಶ್ರಮಿಸಿದ ತಂದೆ ಹೆಗಲು, ತಾಯಿ ಮಡಿಲು ಜಗತ್ತಿನ ಶ್ರೇಷ್ಠ ಪುಣ್ಯಕ್ಷೇತ್ರಗಳು ಎಂದರು.ತಂದೆ, ತಾಯಿಗೆ, ದೇವರಿಗೆ, ನಿಸರ್ಗದ ಸೇವೆಗೆ ದೇಹ ಅರ್ಪಣೆ ಆಗಬೇಕು. ಮನುಷ್ಯ ಸೇವಾ ಅರ್ಪಣೆಗೆ ಹಿಂಜರಿಯಬಾರದು. ಅದುವೇ ಧರ್ಮದ ಸಾರ. ಧರ್ಮ ಅಂದರೆ ನಿಷ್ಕಲ್ಮಶ ಬದುಕು ಆಗಿದೆ. ಹಸಿದಿದ್ದರೂ ಇನ್ನೊಬ್ಬರ ಹಸಿವು ನೀಗಿಸುವ ಹೃದಯ ಪಾತ್ರೆ ದೊಡ್ಡದಿರಬೇಕು. ನಿಶ್ಚಿಂತದಿಂದ ಬದುಕುವುದೇ ಜೀವನ ಎಂದರು.
ಅಪಾರ ಭಕ್ತವೃಂದ ಆಗಮಿಸಿತ್ತು. ಶ್ರೀ ಅಭಿನವ ಪಂಚಾಕ್ಷರ ಶ್ರೀಗಳು ಹಾಗೂ ಹರ ಗುರು ಚರ ಮೂರ್ತಿಗಳಿದ್ದರು.