ಆಹಾರ ಪದ್ಧತಿ ಬದಲಾವಣೆಯಿಂದ ಖಾಯಿಲೆ

| Published : Oct 01 2024, 01:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ: ಆಹಾರ ಪದ್ದತಿಯಲ್ಲಿನ ಬದಲಾವಣೆಯಿಂದಾಗಿ ಜನರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ ಸೇರಿ ಅನೇಕ ರೋಗಗಳು ಸಾಮಾನ್ಯವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮೇಲ: ಆಹಾರ ಪದ್ದತಿಯಲ್ಲಿನ ಬದಲಾವಣೆಯಿಂದಾಗಿ ಜನರಲ್ಲಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ ಸೇರಿ ಅನೇಕ ರೋಗಗಳು ಸಾಮಾನ್ಯವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಹಾದಿಮನಿ ಆಸ್ಪತ್ರೆ ಹಾಗೂ ಸಮಾನ ಮನಸ್ಕರ ಬಳಗ ಹಮ್ಮಿಕೊಂಡಿದ್ದ ಬೃಹತ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಹಾದಿಮನಿ ಆಸ್ಪತ್ರೆಯು ಗ್ರಾಮೀಣ ಪ್ರದೇಶದ ರೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆರೋಗ್ಯ ಜಾಗೃತಿ ಮೂಡಿಸುತ್ತಿದೆ. ವೈದ್ಯ ಡಾ.ಸಮೀರ ಹಾದಿಮನಿ ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.ವಿಜಯಪುರದ ನೇತ್ರ ತಜ್ಞ ಡಾ.ಬಸವರಾಜ್ ಝಳಕಿ, ಮೂತ್ರಪಿಂಡ ತಜ್ಞ ಡಾ.ಸಂದೀಪ ಪಾಟೀಲ್, ಎಲುಬು-ಕೀಲು ತಜ್ಞ ಡಾ.ಪ್ರೀತಿಶ್ ಯಂಡಿಗೇರೆ ಮಾತನಾಡಿ ಜನರು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು, ಉಚಿತ ಆರೋಗ್ಯ ಶಿಬಿರಗಳು ಹಮ್ಮಿಕೊಂಡಾಗ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಡಾ.ಸಮೀರ ಹಾದಿಮನಿ ಪ್ರಾಸ್ತಾವಿಕ ಮಾತನಾಡಿದರು. ಶಿಬಿರದಲ್ಲಿ ಐದು ನೂರಕ್ಕೂ ಅಧಿಕ ರೋಗಿಗಳು ಭಾಗವಹಿಸಿ, ರಕ್ತ, ಮೂತ್ರ ತಪಾಸಣೆ ಸಂಧಿವಾತ, ಸ್ನಾಯು ಸೆಳೆತ, ಮೂಳೆ ಮುರಿತ, ಎಲುಬು-ಕೀಲುಗಳ ಸಮಸ್ಯೆ, ಅಂಧತ್ವ, ಕಣ್ಣಿನ ಪೊರೆ, ಬಿಪಿ, ಮಧುಮೇಹ, ಕಿಡ್ನಿ ಸ್ಟೋನ್ಸ್, ಮೂತ್ರಕೋಶದ ಸೋಂಕು, ಕಿಡ್ನಿ ವೈಫಲ್ಯ, ಉರಿ ಮೂತ್ರ ಸೇರಿದಂತೆ ಮುಂತಾದ ಸಮಸ್ಯೆಗಳ ತಪಾಸಣೆ ಮಾಡಿಸಿಕೊಂಡರು.ಈ ಸಂದರ್ಭದಲ್ಲಿ ಆಲಮೇಲ ಪಪಂ ಅಧ್ಯಕ್ಷ ಸಾಧಿಕ ಸುಂಬಡ್‌, ಡಾ.ಜುನೇರಾ ಹಾದಿಮನಿ, ಸಮಾನ ಮನಸ್ಕರ ಬಳಗದ ಸಚಿನ್ ಕ್ಷೀರಸಾಗರ, ಆರಕ್ಷಕ ಮೌಲಾಲಿ ಆಲಗೂರ, ಮಂಜುನಾಥ ಯಂಟಮಾನ, ಸಿದ್ಧಲಿಂಗ ಕ್ಷೇಮಶೆಟ್ಟಿ, ಬಂದೇನವಾಜ್ ನಾದ ಸೇರಿದಂತೆ ಅನೇಕರಿದ್ದರು.