ಸಾರಾಂಶ
ಸೊರಬ ಪಟ್ಟಣದ ಬಂಗಾರಧಾಮದಲ್ಲಿ ಶ್ರೀಮತಿ ಶಕುಂತಲಾ ಬಂಗಾರಪ್ಪ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಸಚಿವ ಮಧು ಬಂಗಾರಪ್ಪ ಕುಟುಂಬ ಸಮೇತರಾಗಿ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸೊರಬ
ಕಾಂಗ್ರಸ್ ಸರ್ಕಾರದ ಅನ್ನ ತಿಂದು ಬೇರೆಯವರಿಗೆ ಮತ ಹಾಕುವುದು ಮನುಷ್ಯತ್ವದ ಲಕ್ಷಣವೂ ಅಲ್ಲ, ಅದು ಧರ್ಮವೂ ಅಲ್ಲ. ಬಿಜೆಪಿ ಮುಖಂಡರು, ಕಾರ್ಯಕರ್ತರು ಇದನ್ನು ಅರಿಯಬೇಕಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ಪಕ್ಷಗಳ ಮನೆಗಳಿಗೆ ತೆರಳಿ ಈ ಬಗ್ಗೆ ಮನವರಿಕೆ ಮಾಡಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಸೋಮವಾರ ಪಟ್ಟಣದ ಬಂಗಾರಧಾಮದಲ್ಲಿ ಶ್ರೀಮತಿ ಶಕುಂತಲಾ ಬಂಗಾರಪ್ಪರ ಪುಣ್ಯ ಸ್ಮರಣೆ ಪ್ರಯುಕ್ತ ಸಮಾಧಿಗೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿ ನಂತರ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದರು.
ಬಿಜೆಪಿಯವರು ಸಹ ಕಾಂಗ್ರೆಸ್ ರೂಪಿಸಿದ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿ ಯೋಜನೆ ಫಲಾನುಭವಿಯಾಗಿ ನಮ್ಮ ಋಣದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರದ ಅನ್ನ ತಿಂದು ಬೇರೆಯವರಿಗೆ ಮತ ನೀಡುವುದನ್ನು ಯಾರೂ ಕೂಡಾ ಒಪ್ಪುವುದಿಲ್ಲ. ಅವರೂ ಕೂಡಾ ಕಾಂಗ್ರೆಸ್‌ಗೆ ಓಟು ನೀಡಬೇಕು. ಈ ಬಗ್ಗೆ ನಾನೂ ನನ್ನ ಊರು ಕುಬಟೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ತೆರಳಿ ಮನವರಿಕೆ ಮಾಡಿ ಕಾಂಗ್ರೆಸ್ ಪರವಾಗಿ ಮತ ಯಾಚಿಸುತ್ತೇನೆ. ಈ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕು ಎಂದು ಕರೆನೀಡಿದರು.ಬಡವರು, ಕೂಲಿ-ಕಾರ್ಮಿಕರು, ನಿರ್ಗತಿಕರು ಗ್ಯಾರಂಟಿಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ನಮ್ಮ ಋಣ ಅವರ ಮೇಲಿದೆ. ಓಟು ಕೇಳುವ ಹಕ್ಕು ನಮಗಿದೆ. ಇದಕ್ಕೆ ರಾಜ್ಯದ ಪ್ರತಿಯೊಬ್ಬ ಮತದಾರರು ಕಾಂಗ್ರೆಸ್ ಸರ್ಕಾರದ ಋಣ ತೀರಿಸಲು ಸನ್ನದ್ಧರಾಗಿದ್ದಾರೆ. ಅದಾನಿ, ಅಂಬಾನಿಯಂತಹ ಉದ್ಯಮಿಗಳ ಸರ್ಕಾರ ಆಗಿರುವ ಕೇಂದ್ರದ ಬಿಜೆಪಿ ಕೆಳಗಿಳಿಸಿ, ಬಡವರ ಪರವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೊರಬ ಕ್ಷೇತ್ರದ ಇತಿಹಾಸದಲ್ಲಿ ೯೪.೦೦೦೦ ಮತಗಳನ್ನು ನೀಡಿ ದಾಖಲೆಯ ಗೆಲುವು ಸಾಧಿಸಲು ಈ ಕ್ಷೇತ್ರದ ಮತದಾರರು ಸಹಕರಿಸಿದ್ದಾರೆ. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ೩೨ ವರ್ಷಗಳ ನಂತರ ಇಬ್ಬರು ಸಚಿವರಾದರು ಈ ತಾಲೂಕಿಗೆ ಯಾವುದೇ ಅಭಿವೃದ್ಧಿಪರ ಯೋಜನೆ ತರಲು ಸಾಧ್ಯವಾಗಿರಲಿಲ್ಲ. ಆದರೆ ನಮ್ಮ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಮೂಲಕ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ. ಮೋದಿಯವರ ಗ್ಯಾರಂಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಗ್ಯಾರಂಟಿ ಯೋಜನೆಗಾಗಿ ಸರ್ಕಾರ ಈಗಾಗಲೇ ೫೭.೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ ಮಧು ಬಂಗಾರಪ್ಪ, ಬ್ಲಾಕ್ ಅಧ್ಯಕ್ಷರಾದ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಿಗಲಿ, ಜಯಶೀಲಗೌಡ ಅಂಕರವಳ್ಳಿ, ಕೆ.ವಿ.ಗೌಡ, ಹೆಚ್. ಗಣಪತಿ ಹುಲ್ತಿಕೊಪ್ಪ, ಎಂ.ಡಿ. ಶೇಖರ್, ಶಿವಲಿಂಗೇಗೌಡ, ಅಬ್ದುಲ್‌ರಶೀದ್ ಹಿರೇಕೌಂಶಿ, ಮಹಮದ್ ಸಾಜೀದ್, ಸುಜಾಯತ್‌ವುಲ್ಲಾ, ಸತ್ಯನಾರಾಯಣ, ಸುರೇಶ್ ಬಿಳವಾಣಿ, ಸುರೇಶ್ ಹಾವಣ್ಣನವರ್, ಮಧು ಗೌಡ, ಸುನೀಲ್ ಗೌಡ, ಫಯಾಜ್ ಉಳವಿ, ನಾಗರಾಜ್ ಚಿಕ್ಕಸವಿ, ಬಸವೇಶ್ವರ, ಮಂಜು, ಪ್ರವೀಣ್ ಶಾಂತಗೇರಿ, ಸಂಜಯ್, ಶ್ರೀಕಾಂತ್, ಸುಜಾತ ಜೋತಾಡಿ, ಪ್ರೇಮಾ, ರಂಜಿನಿ, ಅತಿಕುರ್ ರೆಹಮಾನ್, ಶಶಿ, ಸಂತೋಷ್, ಬಸವರಾಜ್ ಸೇರಿದಂತೆ ಮೊದಲಾದವರಿದ್ದರು.