ಅಪೌಷ್ಠಿಕ ನಿವಾರಣೆಗೆ ಪೌಷ್ಠಿಕ ಆಹಾರ ಸೇವನೆ ಅಗತ್ಯ: ಮಂಜುನಾಥ

| Published : Sep 04 2024, 01:46 AM IST

ಸಾರಾಂಶ

ಮಕ್ಕಳು ಹಾಗೂ ತಾಯಂದಿರಲ್ಲಿ ಕಂಡು ಬರುವ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಎಲ್ಲರಿಗೂ ತಲುಪಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ತಾಲೂಕು ಮಟ್ಟದ ಪೋಷಣ್‌ ಮಾಸಾಚರಣೆ ಹಾಗೂ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮಕ್ಕಳು ಹಾಗೂ ತಾಯಂದಿರಲ್ಲಿ ಕಂಡು ಬರುವ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಎಲ್ಲರಿಗೂ ತಲುಪಿಸಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.

ತಾಲೂಕಿನ ಗುಮಗೇರಾ ಗ್ರಾಮದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ನಡೆದ ತಾಲೂಕು ಮಟ್ಟದ ಪೋಷಣ್‌ ಮಾಸಾಚರಣೆ ಹಾಗೂ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರವು ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸಿರುವಂತಹ ಪೌಷ್ಟಿಕಯುಕ್ತ ಆಹಾರವನ್ನು ಗರ್ಭೀಣಿ, ಬಾಣಂತಿಯರು, ಮಕ್ಕಳಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು. ಪೌಷ್ಟಿಕ ಆಹಾರವನ್ನು ಉಪಯೋಗ ಮಾಡುವಂತೆ ತಿಳಿಹೇಳುವ ಕೆಲಸ ಮಾಡಬೇಕು. ಅಪೌಷ್ಟಿಕ ಮುಕ್ತ ತಾಲೂಕು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ತಿಪ್ಪಣ್ಣ ಶಿರಸಂಗಿ ಮಾತನಾಡಿ, ಮಕ್ಕಳಿಗೆ ಮೊಳಕೆಕಾಳು, ಸಿರಿಧಾನ್ಯಗಳ ಆಹಾರ ಹಾಗೂ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ನೀಡಬೇಕು. ಮಕ್ಕಳು ಸದೃಢವಾಗಿ ಬೆಳೆದರೆ ಸದೃಢ ದೇಶ ಕಟ್ಟಲು ಸಾಧ್ಯ. ಕ್ರೀಡಾಕೂಟ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಕ್ಕಳು ಬಾಲ್ಯದಲ್ಲೇ ಉತ್ತಮ ಆರೋಗ್ಯ ಹೊಂದಬೇಕು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳು ಹಾಗೂ ತಾಯಂದಿರು ಉತ್ತಮ ಆರೋಗ್ಯ ಹೊಂದಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೌಷ್ಟಿಕದ ಕೊರತೆ ಕಾಡುತ್ತಿದೆ. ಇದರಿಂದ ಹುಟ್ಟುವ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ. ಆದ ಕಾರಣ ಸರ್ಕಾರವು ಅಂಗನವಾಡಿ ಮೂಲಕ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದು, ಅವುಗಳನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಇದೇ ಸಂದರ್ಭದಲ್ಲಿ ಮೊಳಕೆಕಾಳು, ಸಿರಿಧಾನ್ಯ, ಇತರೆ ಆಹಾರ, ಹಣ್ಣು-ತರಕಾರಿ ಹಾಗೂ ಹಾಲಿನ ಪುಡಿಯಿಂದ ತಯಾರಿಸಿದ ಲಾಡು, ಶೇಂಗಾ ಚೆಕ್ಕಿ, ಹೋಳಿಗೆ ಸೇರಿದಂತೆ ವಿವಿಧ ಖಾದ್ಯಗಳ ಪ್ರದರ್ಶನವನ್ನು ನ್ಯಾಯಾಧೀಶರು ಹಾಗೂ ಅಧಿಕಾರಿಗಳು ವೀಕ್ಷಣೆ ಮಾಡಿದರು. ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಯಿತು. ಸೀಮಂತ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಗಂಗಪ್, ಸಿಡಿಪಿಒ ಯಲ್ಲಮ್ಮ ಹಂಡಿ, ಕಲಾವತಿ ಮೆಣೆದಾಳ, ರಾಜಶೇಖರ, ಚಂದ್ರಶೇಖರ

ಸಹಾಯಕ ಅಭಿಯೋಜಕ ರಾಯನಗೌಡ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಿಡಿಪಿಒ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ ಇದ್ದರು. ದೋಟಿಹಾಳ ವಲಯದ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ನಿರೂಪಿಸಿ, ಇಲಾಖೆಯ ಸಿಬ್ಬಂದಿ ಭಾಗ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೆಮನ್ನಾಪೂರ ವಲಯದ ಮೇಲ್ವಿಚಾರಕಿ ನಾಗಮ್ಮ ಗುಂಡೂರ ಸ್ವಾಗತಿಸಿದರು.