ಸಾರಾಂಶ
ಹೊಸಪೇಟೆ: ಗಣಿ ಬಾಧಿತ ಜನರ ಬದುಕು ಮತ್ತು ಪರಿಸರ ಪುನಶ್ಚೇತನ ಸಂಕಲ್ಪ ಸಮಾವೇಶವನ್ನು ಬಳ್ಳಾರಿ ಜಿಲ್ಲೆಯ ಸಂಡೂರಿನ ಆದರ್ಶ ಸಮುದಾಯ ಕೇಂದ್ರದಲ್ಲಿ ಸೆ. 4ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿಯಿಂದ ನಡೆಯಲಿರುವ ಸಮಾವೇಶದ ಗೋಷ್ಠಿ-1ರಲ್ಲಿ ಪರಿಸರ ಹೋರಾಟಗಾರ ನಾಗೇಶ್ ಹೆಗಡೆ ಅವರು ಜಾಗತಿಕ ತಾಪಮಾನ ಮತ್ತು ಅದರ ನಿಯಂತ್ರಣ ವಿಷಯ ಮಂಡನೆ ಮಾಡಲಿದ್ದಾರೆ. ಎಸ್.ಆರ್. ಹಿರೇಮಠ ಅವರು, ಅಕ್ರಮ ಗಣಿಗಾರಿಕೆ ಮತ್ತು ಕಾನೂನು ಹೋರಾಟ, ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ, ಸಂಘಟನೆಯ ಮುಂದಿನ ಹೋರಾಟದ ದಿಕ್ಸೂಚಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಅಖಿಲೇಶ್ ಚಿಪ್ಳಿ, ಪಶ್ಚಿಮ ಘಟ್ಟದ ನಾಶದಿಂದ ಉತ್ತರ ಕರ್ನಾಟಕದ ಮೇಲಾಗುವ ಪರಿಣಾಮಗಳು ವಿಷಯ ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಗೋಷ್ಠಿ-2ರಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ಅಧ್ಯಕ್ಷತೆಯಲ್ಲಿ ಕೃಷಿಕರ ಸುಸ್ಥಿತ ಅಭಿವೃದ್ಧಿ, ವನ್ಯಜೀವಿ ಸಂರಕ್ಷಕ ಸಂತೋಷ ಮಾರ್ಟಿನ್ ಸಂಡೂರಿನ ಅರಣ್ಯ ಹಾಗೂ ವೈವಿಧ್ಯಗಳು, ನಿವೃತ್ತ ಪ್ರಾಧ್ಯಾಪಕ ಟಿ.ಆರ್. ಚಂದ್ರಶೇಖರ್ ಗಣಿಬಾಧಿತ ಜನರ ಆರ್ಥಿಕತೆ ಮತ್ತು ಸಾಮಾಜಿಕ ಸುಧಾರಣೆ ವಿಷಯ ಮಂಡಿಸಲಿದ್ದಾರೆ. ಗೋಷ್ಠಿ-3ರಲ್ಲಿ ಕೃಷಿ ಭೂಮಿಗಳ ಸದ್ಬಳಕೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಿತವಾದ ಬಳಕೆ ವಿಷಯಗಳನ್ನು ಮಂಡಿಸಲಿದ್ದಾರೆ. ಬಳಿಕ ಸಮ್ಮೇಳನದ ನಿರ್ಣಯಗಳನ್ನು ಘೋಷಿಸಲಾಗುತ್ತದೆ ಎಂದರು.
ಗಣಿಗಾರಿಕೆಯಂತಹ ಗಂಭೀರ ಸಮಸ್ಯೆ ಎದುರಿಸಲು ಪ್ರಜಾಪ್ರಭುತ್ವ ಸಶಕ್ತೀಕರಣ ಮತ್ತು ಸಮಗ್ರವಾದದಿಂದ ಸಾಧ್ಯ. ಇದೇ ದೃಷ್ಟಿಕೋನದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಇದಕ್ಕೆ ಪ್ರಬಲ ಜನಾಂದೋಲನದ ಅವಶ್ಯಕತೆ ಇದೆ. ಪರಿಸರ, ಸೂಕ್ಷ್ಮಸಮತೋಲಿತ ಪರಿಸರವನ್ನು ಅಲ್ಲೋಲ ಕಲ್ಲೋಲ ಮಾಡಲಾಗುತ್ತಿದೆ. ವಯನಾಡು ಸೇರಿ ನಾನಾ ಕಡೆ ಅವಘಡಗಳೇ ಇದಕ್ಕೆ ಸಾಕ್ಷಿ. ಇದನ್ನು ಸಮಗ್ರ ಪರಿಕಲ್ಪನೆ ಅವಲೋಕನ ಮಾಡಬೇಕಿದೆ. ಜನರೇ ಗೌರವಯುತ ಜೀವನ ಮಾಡಬೇಕಾದರೆ ಪ್ರಜಾಪ್ರಭುತ್ವ ಸಶಕ್ತೀಕರಣ ಮತ್ತು ಸಮಗ್ರ ಪರಿಕಲ್ಪನೆಯಿಂದ, ಪ್ರಜಾಂದೋಲನದಿಂದ ಸಾಧ್ಯ ಎಂದರು.ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ 2011ರ ಪಾದಯಾತ್ರೆ ವೇಳೆ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದ ಮೇಲೆ ಏನೂ ಮಾಡಲಿಲ್ಲ. ಜಿಂದಾಲ್‌ಗೆ ಭೂಮಿ ಕೊಡುವುದಕ್ಕಿಂತ ಘೋರ ಅನ್ಯಾಯ ಮಾತ್ತೊಂದೇನಿದೆ? ಸರಕಾರ ಮಾಡಿದ ಅತಿ ದೊಡ್ಡ ಜನದ್ರೋಹಿ ನಡೆ ಇದು ಎಂದು ಕಿಡಿ ಕಾರಿದರು.
ಮಲ್ಲಿಕಾರ್ಜುನ, ಹೈದರ್ ಇದ್ದರು.