ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಶಿಕ್ಷಣ ಅರಿವು, ಕೌಶಲ್ಯ ಹಾಗೂ ಜ್ಞಾನವನ್ನು ಬೆಳೆಸುವ ಸಾಧನವಾಗಿದ್ದು, ಆರ್ಥಿಕವಾಗಿ ಸಾಮಾಜಿಕವಾಗಿ ನಮ್ಮನ್ನು ಸದೃಢ ಮಾಡುವ ಶಕ್ತಿ ಹೊಂದಿದೆ. ವಿಶೇಷವಾಗಿ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಶಿಕ್ಷಣ ಅರಿವು, ಕೌಶಲ್ಯ ಹಾಗೂ ಜ್ಞಾನವನ್ನು ಬೆಳೆಸುವ ಸಾಧನವಾಗಿದ್ದು, ಆರ್ಥಿಕವಾಗಿ ಸಾಮಾಜಿಕವಾಗಿ ನಮ್ಮನ್ನು ಸದೃಢ ಮಾಡುವ ಶಕ್ತಿ ಹೊಂದಿದೆ. ವಿಶೇಷವಾಗಿ ಮಹಿಳಾ ಶಿಕ್ಷಣ ಹಾಗೂ ಸಬಲೀಕರಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆ ಹಾಗೂ 14ನೇ ಅಖಿಲ ಭಾರತ ಶೈಕ್ಷಣಿಕ ಆಂದೋಲನದಡಿಯಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಸಮ್ಮೇಳನದ 3ನೇ ದಿನದ ಮಹಿಳಾ ಶಿಕ್ಷಣ ಮತ್ತು ಸಬಲೀಕರಣ ಕುರಿತ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಲಿಂಗ ಸಮಾನತೆಯಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವಿದೆ. ಇದನ್ನು ಅರಿತು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಜರೂರತು ಇದೆ. ಪ್ರಾಥಮಿಕ ಶಿಕ್ಷಣ ಹಂತದಿಂದ ಪದವಿ ಹಂತಕ್ಕೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಕಾರಣ ಮಹಿಳೆಯರು ನಾಯಕತ್ವ ಗುಣಗಳನ್ನು ಬೆಳಸಿಕೊಂಡು ಸಮಾಜದ ವಿವಿಧ ರಂಗಗಳಲ್ಲಿ ಕೆಲಸ ಮಾಡುವ ಮೂಲಕ ಮುನ್ನೆಲೆಗೆ ಬರಬೇಕೆಂದು ಕರೆ ನೀಡಿದರು.ಗೋಷ್ಠಿಯಲ್ಲಿ ಮಹಿಳಾ ಸಬಲೀಕರಣದ ವಿವಿಧ ವಿಷಯಗಳ ಕುರಿತು ಹಲೀಮಾ ಸಾದಿಯಾ, ಸಯ್ಯದಾ ಮೆಹರ ಅಪ್ಸಾನಾ, ಡಾ.ಹಾಜಿರಾ ಪರವೀನ ಅವರು ಮಾತನಾಡಿದರು. ಡಾ.ಸುಜಾತಾ ಕಟ್ಟಿಮನಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಪಾಟೀಲ, ಆರ್.ಎ.ಪುಣೇಕರ, ಡಾ.ಸುಜಾವುದ್ದೀನ ಹಾಗೂ ಪ್ರಾಚಾರ್ಯ ಡಾ.ಎಚ್.ಕೆ.ಯಡಹಳ್ಳಿ ಅವರು ಉಪಸ್ಥಿತರಿದರು. ಗೋಷ್ಠಿಯ ಸಂಯೋಜಕರಾಗಿ ಪ್ರೊ.ವಿದ್ಯಾವತಿ ಬೆನ್ನೂರಮಠ ಕಾರ್ಯನಿರ್ವಹಿಸಿದರು. ಪ್ರೊ.ಸಾದಿಯಾ ಬಾನು ನಿರೂಪಿಸಿದರು.