ಸಾರಾಂಶ
ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ ಸುಧಾರಿತ ಕೃಷಿಗೆ ಮುಂದಾದಲ್ಲಿ ಆರ್ಥಿಕ ಅನುಕೂಲ ಹಾಗೂ ಸಮಯದ ಉಳಿತಾಯವೂ ಸಾಧ್ಯ ಎಂದು ಆತ್ಮಾ ಯೋಜನೆ ಅಕ್ಕಿಆಲೂರು ಆರ್‌ಎಸ್‌ಕೆ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸಂಜೀವ ಲಮಾಣಿ ತಿಳಿಸಿದರು.
ಹಾನಗಲ್ಲ: ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಮೂಲಕ ಸುಧಾರಿತ ಕೃಷಿಗೆ ಮುಂದಾದಲ್ಲಿ ಆರ್ಥಿಕ ಅನುಕೂಲ ಹಾಗೂ ಸಮಯದ ಉಳಿತಾಯವೂ ಸಾಧ್ಯ ಎಂದು ಆತ್ಮಾ ಯೋಜನೆ ಅಕ್ಕಿಆಲೂರು ಆರ್‌ಎಸ್‌ಕೆ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಸಂಜೀವ ಲಮಾಣಿ ತಿಳಿಸಿದರು.ಹಾನಗಲ್ಲ ತಾಲೂಕಿನ ಹಿರೇಬಾಸೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ ಕೃಷಿಕರಿಗೆ ಯಾಂತ್ರೀಕರಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ ಕೃಷಿಗೆ ಕೂಲಿ ಕಾರ್ಮಿಕರ ಕೊರತೆ ಎಂದು ರೈತರು ಗೋಳಿಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ಯಂತ್ರೋಪಕರಣಗಳ ಮೂಲಕ ಅಗತ್ಯ ಕೃಷಿಗೆ ಮುಂದಾಗಬೇಕು. ಕೃಷಿ ಇಲಾಖೆ ಕೂಡ ರೈತರಿಗೆ ರಿಯಾಯತಿ ದರದಲ್ಲಿ ಯಂತ್ರೋಪಕರಣಗಳನ್ನು ನೀಡುತ್ತಿದೆ. ಸರಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಯಲ್ಲಿ ಹೊಸತನ್ನು ಕಾಣವ ಅಗತ್ಯವಿದೆ. ಪ್ರಾಕೃತಿಕವಾದ ಅಸಮತೋಲನದ ನಡುವೆ ರೈತ ಸಮುದಾಯ ಇಂದು ಬೆಳೆ ಬೆಲೆ ಸಮಸ್ಯೆಯನ್ನು ಎದುರಿಸುತ್ತಿದ್ದಾನೆ. ಸಾಂಪ್ರದಾಯಿಕ ಕೃಷಿ ಬೇಕು. ಆದರೆ ಅಗತ್ಯವಿರುವಲ್ಲಿ ಬದಲಾದ ಕಾಲಕ್ಕೆ ಯಂತ್ರ ಕೃಷಿಯನ್ನೂ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಮಹಂತೇಶ ಮಾತನಾಡಿ, ನಮ್ಮ ದೇಶ ಬಹುತೇಕ ಕೃಷಿ ಆಧಾರಿತ ಜೀವನದ ದೇಶ. ಹಾನಗಲ್ಲ ತಾಲೂಕು ಯಾವುದೇ ಉದ್ಯಮಗಳಿಲ್ಲದೆ ಬಹುತೇಕ ಕೃಷಿಯನ್ನೇ ಅವಲಂಬಿಸಿದೆ. ಇಂತಹದರಲ್ಲಿಯೂ ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸಲಾಗುತ್ತಿದೆ. ಕೂಲಿಗಾಗಿ ಗುಳೇ ಹೋಗುವ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ರೈತರು ಸಮೂಹ ಕೃಷಿಗೆ ಮುಂದಾದಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಎಲ್ಲದಕ್ಕೂ ಮುಖ್ಯವಾಗಿ ಈಗ ಸಾವಯವ ಕೃಷಿಗೆ ಆದ್ಯತೆ ನೀಡಲೇಬೇಕಾಗಿದೆ. ರಾಸಾಯನಿಕ ಆಧಾರಿತ ಕೃಷಿಯಿಂದ ಭೂಮಿ ಹಾಳಾಗಿದೆ. ಬೆಲೆ ಕೈಗೆ ಸಿಗುತ್ತಿಲ್ಲ. ಬದಲಾವಣೆ ಕೃಷಿಗೆ ಸಹಕಾರಿಯಾಗಿರಬೇಕೆ ಹೊರತು ಮಾರಕವಾಗಬಾರದು. ಯಂತ್ರ ಕೃಷಿ ಬಳಸಿಕೊಳ್ಳೋಣ. ಈ ಮೂಲಕ ಆರ್ಥಿಕ ಸಮೃದ್ಧಿಗೆ ಮುಂದಾಗಲು ಯೋಚಿಸಬೇಕು ಎಂದರು.ಪ್ರಗತಿಪರ ರೈತ ಪ್ರಬಣ್ಣ ಬಾಗಣ್ಣನವರ ಅಧ್ಯಕ್ಷತೆವಹಿಸಿ ಮಾತನಾಡಿ, ಕೃಷಿಯನ್ನೇ ಅವಲಂಬಿಸಿದ ಈ ಭಾಗದ ರೈತರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಉತ್ತಮ ನೀರಾವರಿ ವ್ಯವಸ್ಥೆ ಬೇಕಾಗಿದೆ. ಕೂಡಿ ದುಡಿಯುವ ಪದ್ಧತಿ ರೈತರಲ್ಲಿ ಆರಂಭವಾಗಬೇಕು. ನಾ ನಿನಗಿದ್ದರೆ ನೀ ನನಗೆ ಎಂಬಂತೆ ಹಿಂದೆ ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರೂ ಕೂಡಿ ಕೃಷಿ ಮಾಡುತ್ತಿದ್ದರು. ಈಗ ಮತ್ತೆ ಅದೇ ಪದ್ಧತಿ ಆರಂಭವಾಗಬೇಕು. ರೈತರು ಒಟ್ಟಾಗಿ ನಮ್ಮೆಲ್ಲರ ಹಿತಾಸಕ್ತಿಗೆ ದುಡಿಯೋಣ. ಸರಕಾರದ ಸೌಲಭ್ಯಗಳನ್ನೇ ನಂಬಿ ಕೂಡದೇ ನಮ್ಮ ಸ್ವಂತ ಶಕ್ತಿಯ ಮೇಲೆ ನಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗೋಣ ಎಂದರು.ವಲಯ ಮೇಲ್ವಿಚಾರಕ ನಾಗರಾಜ, ರೈತ ಪ್ರಮುಖರಾದ ಮಲ್ಲೇಶಪ್ಪ ಮುಗಳಿಕಟ್ಟಿ, ರಾಜು ಕಳ್ಳಿ, ರಮೇಶ ಬೆಟಗೇರಿ ಮೊದಲಾದವರು ವೇದಿಕೆಯಲ್ಲಿದ್ದರು.