ಅನ್ಯ ನಗರಗಳಿಗೆ ದುಡಿಯಲು ವಲಸೆ ಹೋಗದೆ ಇದ್ದೂರಲ್ಲೇ ಇರುವ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಇಒ ಅಮರೇಶ ಹೇಳಿದರು
ಕುಷ್ಟಗಿ: ಅನ್ಯ ನಗರಗಳಿಗೆ ದುಡಿಯಲು ವಲಸೆ ಹೋಗದೆ ಇದ್ದೂರಲ್ಲೇ ಇರುವ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಇಒ ಅಮರೇಶ ಹೇಳಿದರು.
ತಾಲೂಕಿನ ತಳುವಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಡೆದ ಮನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರುನರೇಗಾದಡಿ ಕೆಲಸ ಮಾಡಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದ ಅವರು ಕೆಲಸದಲ್ಲಿ ನೀಡಿದಂತಹ ಅಳತೆಗೆ ಅನುಗುಣವಾಗಿ ಕೆಲಸ ನಿರ್ವಹಿಸುವುದರ ಮೂಲಕ ಸಂಪೂರ್ಣ ಕೂಲಿ ಹಣವನ್ನು ಪಡೆದುಕೊಂಡು ನಿಮ್ಮ ದೈನಂದಿನ ಕೃಷಿ ಚಟುವಟಿಕೆಗೆ, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ದುಡ್ಡನ್ನು ಬಳಸುವ ಮೂಲಕ ಉತ್ತಮ ಜೀವನ ಸಾಗಿಸಲು ಮನರೇಗಾ ಯೋಜನೆ ತುಂಬಾ ಸಹಕಾರಿಯಾಗಿದೆ. ಗ್ರಾಮದ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿವಿಧೆಡೆ ಭೇಟಿತಳುವಗೇರಾ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ನಿರ್ವಹಣೆ ಕುರಿತು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಆಹಾರ ಹಾಗೂ ಮೂಲಭೂತ ಸೌಕರ್ಯಗಳು ಕುರಿತು ಪರಿಶೀಲಿಸಿದರು. ಸರ್ಕಾರಿ ಶಾಲೆಯ ಬಿಸಿಯೂಟದ ಕೊಠಡಿಗೆ ಭೇಟಿ ನೀಡಿ ಅಡುಗೆ ತಯಾರಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ವಿ.ಎಚ್., ತಾಂತ್ರಿಕ ಸಂಯೋಜಕ ಬಸವರಾಜ, ಐಇಸಿ ಸಂಯೋಜಕ ಚಂದ್ರಶೇಖರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀನಸಾಬ್ ಅಲಾಂದಾರ ಸೇರಿದಂತೆ ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.