ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ
ಮರಿಯಮ್ಮನಹಳ್ಳಿ: ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಎಂಎಸ್‌ಪಿಎಲ್ ಕಂಪನಿಯ ಸಿ.ಎಸ್.ಆರ್. ವಿಭಾಗದ ಉಪಾಧ್ಯಕ್ಷ ಎಚ್.ಕೆ. ರಮೇಶ್ ಹೇಳಿದರು.ಸಮೀಪದ ಡಣಾಯಕನಕೆರೆ ಗ್ರಾಮದಲ್ಲಿ ಎಂ.ಎಸ್.ಪಿ.ಎಲ್. ಕಂಪನಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ 6 ತಿಂಗಳ ಕಾಲ ಉಚಿತ ಹೊಲಿಗೆ ಯಂತ್ರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸ್ವಯಂ ಉದ್ಯೋಗ ಪಡೆದುಕೊಂಡಾಗ ಇಡೀ ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ದೂರು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಪ್ರತಿಯೊಬ್ಬ ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸಬಲರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು. ನಮ್ಮ ಕಂಪನಿ ಮಹಿಳೆಯರ ಸಬಲೀಕರಣಕ್ಕೆ ಯಾವತ್ತೂ ಅವರ ಜೊತೆ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಕಸೂತಿ ಕಲೆ ಕುರಿತಂತೆಯೂ ತರಬೇತಿ ನೀಡುತ್ತೇವೆ ಎಂದರು.
ಎಚ್.ಆರ್. ವಿಭಾಗದ ವೀರೇಶ್ ಸಾಮಂತ್ರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 6 ತಿಂಗಳ ಕಾಲ ಹೊಲಿಗೆ ತರಬೇತಿ ನೀಡುತ್ತಿದ್ದೇವೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಂಡು ಸ್ವಯಂ ಉದ್ಯೋಗ ಕಂಡುಕೊಳ್ಳಬೇಕು ಎಂದು ಹೇಳಿದರು.ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜುಕೇಷನಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಮಮತಾ ಮತ್ತು ಅರುಣಾ ಮಾತನಾಡಿದರು.
ಡಣಾಯಕನಕೆರೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ನಾಗರಾಜ, ಎಂ.ಎಸ್.ಪಿ.ಎಲ್. ಕಂಪನಿಯ ರವಿ ಬಿಸಗುಪ್ಪಿ, ನಾಗರಾಜ, ಶಂಭುಲಿಂಗ, ಸ್ಥಳೀಯ ಮುಖಂಡ ಇಮಾಮ್ ಸಾಬ್, ಗ್ರಾಪಂ ಸಿಬ್ಬಂದಿ ರಮೇಶ್, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಸಂಸ್ಥೆಯ ಸಿಬ್ಬಂದಿ ಶೋಭಾ, ಭಾಗ್ಯ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಉಚಿತ ಹೊಲಿಗೆ ಯಂತ್ರ ತರಬೇತಿ ಶಿಬಿರದ ಕಾರ್ಯಕ್ರಮವನ್ನು ಎಂ.ಎಸ್.ಪಿ.ಎಲ್. ಕಂಪನಿಯ ಸಿ.ಎಸ್.ಆರ್. ವಿಭಾಗದ ಉಪಾಧ್ಯಕ್ಷ ಎಚ್. ಕೆ. ರಮೇಶ್ ಉದ್ಘಾಟಿಸಿದರು.