ಸಾರಾಂಶ
ತಾಲೂಕು ಮಟ್ಟದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುದೇಶದಲ್ಲಿ ಸಹಕಾರ ತತ್ವ ಜಾರಿಗೊಂಡ ಬಳಿಕ ರೈತರು ಸ್ವಾವಲಂಬಿಗಳಾಗಿ ಆರ್ಥಿಕ ಸಬಲೀಕರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೌಹಾರ್ದ ಸಂಘಗಳ ಮೈಸೂರು ವಿಭಾಗದ ಪ್ರಾಂತೀಯ ಅಧಿಕಾರಿ ಶಿವಕುಮಾರ ಬಿರಾದಾರ್ ಹೇಳಿದರು. ಪಟ್ಟಣದ ರೋಟರಿ ಭವನದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಬಾಳೆಹೊನ್ನೂರು ಸೌಹಾರ್ದ ಸಹಕಾರಿ ಸಂಘದ ಸೇರಿದಂತೆ ಎನ್.ಆರ್.ಪುರ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ಲೇವಾದೇವಿದಾರರಿಂದ ಬಡ ರೈತರ ಶೋಷಣೆ ತಡೆಯಲು ರಾಷ್ಟ್ರದಲ್ಲಿ ಮೊದಲ ಬಾರಿಗೆ ಕರ್ನಾಟಕದ ಗದುಗಿನ ಕಣಗಿನಹಾಳದಲ್ಲಿ ನೌಕರರ ಸಂಘ ಸ್ಥಾಪನೆಗೊಂಡು ರೈತರ ಜೀವನಾಡಿಯಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿತು.
ಪ್ರಸ್ತುತ ದೇಶದಲ್ಲಿ 40 ಕೋಟಿ ಜನರು ಸಹಕಾರ ಸಂಘದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ 45 ಸಾವಿರ ಸಹಕಾರ ಸಂಘಗಳಿವೆ. 6 ಸಾವಿರ ಸೌಹಾರ್ಧ ಸಹಕಾರ ಸಂಘಗಳಿವೆ. ಸಮಾಜದ ಕಟ್ಟಕಡೆ ವ್ಯಕ್ತಿಗೂ ಸೇವೆ ಲಭಿಸುವಂತಾಗಬೇಕು ಎಂಬುದು ಸಹಕಾರದ ಉದ್ದೇಶವಾಗಿದೆ. ಸಹಕಾರ ಸಂಘಗಳಲ್ಲಿ ನಂಬಿಕೆ, ಪ್ರಾಮಾಣಿಕತೆ ಪ್ರಮುಖವಾಗಿದ್ದು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಸಮನ್ವಯವಿರಬೇಕು ಎಂದರು. ಸಹಕಾರಿ ಮುಖಂಡ ಜಿ.ಕೆ.ದಿವಾಕರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಹಕಾರ ಸಂಘದಲ್ಲಿ 1.20 ಕೋಟಿ ಠೇವಣಿದಾರರು ಠೇವಣಿ ಇರಿಸಿದ್ದಾರೆ. ಕೇಂದ್ರದ ಸಹಕಾರ ಸಚಿವರಾದ ಅಮಿತ್ ಶಾ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಿದ್ದಾರೆ ಎಂದರು. ಶಿವಮೊಗ್ಗ ಎನ್.ಸಿ.ಯು.ಐನ ಸಮನಯ್ವಾಧಿಕಾರಿ ಎ.ಜಿ.ಅನಿತಾ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೈ ಬಾಯಿ ಶುದ್ಧವಿದ್ದಾಗ ಮಾತ್ರ ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ. ಉತ್ತರ ಭಾರತದಲ್ಲಿ ಸಹಕಾರ ಕ್ಷೇತ್ರ ಪ್ರಬಲವಾಗಿದ್ದು, ದಕ್ಷಿಣ ಭಾರತದವರಿಗೆ ಅವಕಾಶವನ್ನೇ ಕೊಡುತ್ತಿಲ್ಲ.ಮಹಿಳೆಯರು ಪ್ರತ್ಯೇಕ ಸಹಕಾರ ಸಂಘ ಪ್ರಾರಂಭಿಸಬೇಕು. ಮಲೆನಾಡಿನಲ್ಲಿ ಭತ್ತದಗದ್ದೆ ಮಾಯವಾಗಿ ವಾಣಿಜ್ಯ ಬೆಳೆಯತ್ತ ತೊಡಗಿಸಿ ಕೊಂಡಿದ್ದಾರೆ. ಭವಿಷ್ಯದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಯಿದೆ ಈ ಬಗ್ಗೆ ಚಿಂತನ ಮಂಥನವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಉತ್ತಮ ಸೌಹಾರ್ಧ ಸಹಕಾರ ಸಂಘ ಪ್ರಶಸ್ತಿಯನ್ನು ಪಟ್ಟಣದ ಅಪೂರ್ವ ಸೌಹಾರ್ಧ ಸಹಕಾರ ಸಂಘಕ್ಕೆ ನೀಡಿ ಗೌರವಿಸÀಲಾಯಿತು. ಬಾಳೆಹೊನ್ನೂರು ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ವಿ.ಮೋಹನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಕರಪ್ಪ, ಬಾಳೆಹೊನ್ನೂರು ಸೌಹಾರ್ಧದ ಸಿಇಓ ಸೂರ್ಯನಾರಾಯಣ, ನಿರ್ದೇಶಕರಾದ ಕೆ.ಕೆ.ವೆಂಕಟೇಶ್, ಬಿ.ಎಸ್.ಶ್ರೀನಿವಾಸ್, ಎ.ಆರ್.ಸುರೇಂದ್ರ, ಕೆ.ಕೆ.ವೆಂಕಟೇಶ್, ಸತೀಶ್ ಅರಳೀಕೊಪ್ಪ, ಎಚ್.ಕೆ.ವೆಂಕಟೇಶ್‌ಭಟ್, ಎಂ.ಎಲ್.ಮಂಜೇಶ್ ಮತ್ತಿತರರು ಹಾಜರಿದ್ದರು.
೧೯ಬಿಹೆಚ್‌ಆರ್ ೧:ಬಾಳೆಹೊನ್ನೂರಿನಲ್ಲಿ ನಡೆದ ತಾಲೂಕು ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಸೌಹಾರ್ಧ ಸಹಕಾರ ಸಂಘ ಪ್ರಶಸ್ತಿಯನ್ನು ಪಟ್ಟಣದ ಅಪೂರ್ವ ಸೌಹಾರ್ಧ ಸಹಕಾರ ಸಂಘಕ್ಕೆ ನೀಡಿ ಗೌರವಿಸಲಾಯಿತು. ಶಿವಕುಮಾರ್, ದಿವಾಕರ್ ಅನಿತಾ, ವೆಂಕಟೇಶ್, ಮೋಹನ್ ಮತ್ತಿತರರು ಇದ್ದರು.