ಆಸಕ್ತಿ ಇದ್ದಾಗ ಮಾತ್ರ ಆರ್ಥಿಕ ಯಶಸ್ಸು ಸಾಧ್ಯ

| Published : Mar 05 2025, 12:33 AM IST

ಆಸಕ್ತಿ ಇದ್ದಾಗ ಮಾತ್ರ ಆರ್ಥಿಕ ಯಶಸ್ಸು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೈನುಗಾರಿಕೆಯಲ್ಲಿ ನಿರಂತರ ಪರಿಶ್ರಮ, ಆಸಕ್ತಿ ಇದ್ದಾಗ ಮಾತ್ರ ಆರ್ಥಿಕ ಯಶಸ್ಸು ಗಳಿಸಲು ಸಾಧ್ಯ. ರೈತರಿಗೆ ಹಾಲು ಉತ್ಪಾದನೆ ಬಗ್ಗೆ ತರಬೇತಿ ನೀಡಿ, ಉತ್ಪಾದನೆಯಲ್ಲಿ ಹೆಚ್ಚಳ ಮಾಡಿಕೊಳ್ಳುವಂತೆ ಅರಿವು ಮೂಡಿಸಲಾಗಿದ್ದು ಹೆಚ್ಚು ಹಾಲು ಉತ್ಪಾದನೆಯಿಂದ ಬಡ ರೈತ ಕುಟುಂಬಗಳ ಆರ್ಥಿಕ ಸದೃಢತೆಗೆ ಮತ್ತಷ್ಟು ಬಲ ನೀಡಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಹೈನುಗಾರಿಕೆಯಲ್ಲಿ ನಿರಂತರ ಪರಿಶ್ರಮ, ಆಸಕ್ತಿ ಇದ್ದಾಗ ಮಾತ್ರ ಆರ್ಥಿಕ ಯಶಸ್ಸು ಗಳಿಸಲು ಸಾಧ್ಯ. ರೈತರಿಗೆ ಹಾಲು ಉತ್ಪಾದನೆ ಬಗ್ಗೆ ತರಬೇತಿ ನೀಡಿ, ಉತ್ಪಾದನೆಯಲ್ಲಿ ಹೆಚ್ಚಳ ಮಾಡಿಕೊಳ್ಳುವಂತೆ ಅರಿವು ಮೂಡಿಸಲಾಗಿದ್ದು ಹೆಚ್ಚು ಹಾಲು ಉತ್ಪಾದನೆಯಿಂದ ಬಡ ರೈತ ಕುಟುಂಬಗಳ ಆರ್ಥಿಕ ಸದೃಢತೆಗೆ ಮತ್ತಷ್ಟು ಬಲ ನೀಡಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು. ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿರುವ ಡಾ. ವರ್ಗಿಸ್ ಕುರಿಯನ್ ಸಭಾಂಗಣದಲ್ಲಿ ಮಂಗಳವಾರ ಪ್ರಗತಿಪರ ಹಾಲು ಉತ್ಪಾದಕರಿಗೆ ಆಯೋಜಿಸಿದ್ದ ವೈಜ್ಞಾನಿಕ ಹೈನುಗಾರಿಕೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಿರಾ ತಾಲೂಕಿನಲ್ಲಿ ಪ್ರತಿನಿತ್ಯ 50 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೈನುಗಾರಿಕೆ ಬಗ್ಗೆ ರೈತರಿಗೆ ಹೆಚ್ಚು ತರಬೇತಿ ನೀಡಿ 1 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವುದು ಈ ನಮ್ಮ ಗುರಿಯಾಗಿದೆ. ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿ ನೀಡುವಂತಹ ಮಾಹಿತಿಯನ್ನು ಪಡೆದು ತಮ್ಮ ಹೈನುಗಾರಿಕೆಯಲ್ಲಿ ಅಳವಡಿಸಿಕೊಂಡರೆ, ಯಶಸ್ವಿ ಹಾಲು ಉತ್ಪಾದಕರಾಗಬಹುದು. ಹಾಲು ಉತ್ಪಾದಕರು ಮ್ಯಾಟ್ ಸೇರಿದಂತೆ ಇತರೆ ಸಲಕರಣೆಗಳನ್ನು ನೀಡುವಂತೆ ಮನವಿ ಮಾಡಿದ್ದು, ಶಿರಾ ತಾಲೂಕಿನಲ್ಲಿ ರೈತರು ಹಾಲು ಉತ್ಪಾದನೆ ಹೆಚ್ಚಳ ಮಾಡಿಕೊಳ್ಳುವುದರ ಜೊತೆಗೆ, ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದರು.

ತುಮಕೂರು ಹಾಲು ಒಕ್ಕೂಟ ಹೈನುಗಾರರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ಧವಾಗಿದ್ದು ಏಪ್ರಿಲ್ ನಲ್ಲಿ ನಡೆಯುವ ಹಾಲು ಒಕ್ಕೂಟದ ಬಜೆಟ್ ನಲ್ಲಿ ಹೈನುಗಾರರಿಗೆ ಅವಶ್ಯಕವಿರುವ ಸೌಲಭ್ಯಗಳಿಗೆ ಹೆಚ್ಚು ಆದ್ಯತೆ ನೀಡಿ ಅತಿ ಶೀಘ್ರದಲ್ಲಿಯೇ ಹಾಲು ಉತ್ಪಾದಕರಿಗೆ ಬೇಕಾಗುವಂತಹ ಸೌಲಭ್ಯಗಳನ್ನು ವಿತರಣೆ ಮಾಡುತ್ತೇವೆ ಎಂದರು. ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ ಶಿರಾ ತಾಲೂಕಿನ ರೈತರು ಡೇರಿಗಳಿಗೆ ಹಾಕುತ್ತಿರುವ ಹಾಲಿನ ಗುಣಮಟ್ಟ ಉತ್ತಮವಾಗಿರುವ ಕಾರಣ ಶಿರಾ ಹಾಲನ್ನು ಬಾಂಬೆಗೆ ಕಳಿಸುವಂತಹ ಕೆಲಸ ಒಕ್ಕೂಟ ಮಾಡುತ್ತಿದೆ. ಹಾಲಿನ ಉತ್ಪಾದನೆಯನ್ನು ಹೆಚ್ಚಳದ ಜೊತೆಗೆ ಇದೇ ರೀತಿ ಗುಣಮಟ್ಟದ ಹಾಲನ್ನು ನೀಡಿದರೆ ಇತರ ರಾಜ್ಯಗಳಿಗೂ ಕಳಿಸಲು ಸಹಕಾರಿಯಾಗುತ್ತದೆ. ಅಲ್ಲದೆ ಇದರಿಂದ ಬಂದಂತಹ ಲಾಭಾಂಶವನ್ನು ಈ ಭಾಗದ ಹಾಲು ಉತ್ಪಾದಕರಿಗೆ ನೀಡಲು ಸಹಕಾರಿಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ 25 ಲೀಟರ್ ಹಾಲು ನಿತ್ಯ ಡೇರಿಗೆ ಹಾಕುವ 160 ಪ್ರಗತಿಪರ ರೈತರಿಗೆ ಖನಿಜ ಮಿಶ್ರಣ, ಕೆಚ್ಚಲು ಬಾವು ಔಷಧಿ, ಹೈನುಗಾರಿಕೆ ಕೈಪಿಡಿಯನ್ನು ವಿತರಣೆ ಮಾಡಲಾಯಿತು. ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ. ರಾಘವನ್ ಉಪನ್ಯಾಸ ನೀಡಿದರು. ಕೆಎಂಎಫ್ ವ್ಯವಸ್ಥಾಪಕ ಚಂದ್ರಶೇಖರ್, ಶ್ರೀನಿವಾಸ್, ಶಿರಾ ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿಗಳಾದ ಚೈತ್ರ, ಕಿರಣ್ ಕುಮಾರ್, ಸಮಾಲೋಚಕ ದಯಾನಂದ್, ಪಶುವೈದ್ಯ ಡಾ. ಶ್ರೀಕಾಂತ್, ಕೆಮಿಸ್ಟರ್ ಪಿ.ಎಂ.ಬಾಬಾ ಫಕೃದ್ಧೀನ, ಹನುಮಂತರಾಯ ಸೇರಿದಂತೆ ಶಿರಾ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಗತಿಪರ ರೈತರು, ಹಾಲು ಉತ್ಪಾದಕರು ಹಾಜರಿದ್ದರು.