ಸಹಕಾರ ಸಂಘಗಳ ಮೂಲಕ ಬಡವರ ಆರ್ಥಿಕ ಸುಧಾರಣೆ

| Published : Apr 18 2025, 12:35 AM IST

ಸಾರಾಂಶ

ಚಿತ್ರದುರ್ಗದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್ ಜೆಪಿ) ಪತ್ತಿನ ಸಹಕಾರ ಸಂಘಕ್ಕೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಚಾಲನೆ ನೀಡಿದರು.

ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ಉದ್ಘಾಟನೆಯಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಹಕಾರ ಸಂಘ ಸ್ಥಾಪನೆ ಮೂಲಕ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಸಾಧ್ಯವಿದೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಹೇಳಿದರು.

ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಮುಖ್ಯ ವೃತ್ತದ ಬಳಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್‌ಜೆಪಿ) ಪತ್ತಿನ ಸಹಕಾರ ಸಂಘ ಪ್ರಾರಂಭೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಸಹಕಾರ ಎನ್ನುವುದು ಎಲ್ಲರಿಗೂ ಅಗತ್ಯವಾಗಿದೆ. ಒಬ್ಬರ ಸಹಕಾರ ಇನ್ನೊಬ್ಬರಿಗೆ ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಠವಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲವನ್ನು ನೀಡುವಾಗ ವಿವಿಧ ರೀತಿಯ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಅಲೆದಾಡಿಸುತ್ತಾರೆ. ಈ ರೀತಿಯ ಸಹಕಾರಿ ಬ್ಯಾಂಕ್‌ಗಳು ಬಡವರ ಪಾಲಿಗೆ ವರದಾನವಾಗುತ್ತಿವೆ ಎಂದರು.

ಸಹಕಾರ ಸಂಘಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸರಿಯಾಗಿ ಇರಬೇಕಿದೆ. ಆಡಳಿತ ಮಂಡಳಿ ಎಲ್ಲದಕ್ಕೂ ಮಧ್ಯ ಬರಬಾರದು. ಕೆಲವೊಂದು ಸ್ವಾತಂತ್ರ್ಯಗಳನ್ನು ವ್ಯವಸ್ಥಾಪಕರಿಗೆ ನೀಡುವುದರ ಮೂಲಕ ಉತ್ತಮವಾಗಿ ಸಹಕಾರ ಸಂಘ ನಡೆಯಲು ಅನುವು ಮಾಡಬೇಕಿದೆ. ಹಣ ಇದ್ದವರು ಡಿಪಾಜಿಟ್ ಮಾಡುವುದರ ಮೂಲಕ ಬೇರೆಯವರಿಗೆ ನೆರವಾಗಬೇಕಿದೆ. ಸಂಘದ ಆಡಳಿತ ಮಂಡಳಿಯವರು ಸಾಧ್ಯವಾದಷ್ಟು ಬಡವರಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರ ಅರ್ಥಿಕ ಪರಿಸ್ಥಿತಿ ಸುಧಾರಿಸುವುದರ ಕಡೆ ಗಮನ ನೀಡುವಂತೆ ಬಸವರಾಜನ್ ಮನವಿ ಮಾಡಿದರು.

ಸಹಕಾರ ಸಂಘದ ಮುಖ್ಯ ಪ್ರವರ್ತಕ ಕಲ್ಲೇಶಯ್ಯ ಮಾತನಾಡಿ, ಸಹಕಾರ ಸಂಘ ಸ್ಥಾಪನೆ ಮಾಡಲು ಹಲವಾರು ವರ್ಷಗಳ ಕಾಲ ಕಷ್ಟ ಎದುರಿಸಲಾಗಿದೆ. ನಮ್ಮ ಸಮುದಾಯದ ಮನೆಗಳಿಗೆ ಭೇಟಿ ಮಾಡಿ ಅವರಿಂದ ಷೇರು ಹಣ ಪಡೆಯಲಾಗಿದೆ. ಶೇರುದಾರರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳುವ ನಿಟ್ಟನಲ್ಲಿ ಕೆಲಸ ಮಾಡಲಾಗುತ್ತದೆ. ಮಂದಿನ ದಿನದಲ್ಲಿ ಸಹಕಾರ ಸಂಘ ಉತ್ತಮ ಕಾರ್ಯ ಮಾಡುತ್ತದೆ ಎಂದು ಹೇಳಿದರು.

ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ನಮ್ಮ ಸಮಾಜದ ಬಹು ದಿನಗಳ ಬೇಡಿಕೆ ಈಡೇರಿದೆ. ಇದಕ್ಕೆ ಎಲ್ಲರ ಸಹಕಾರ ಇದೆ. ಮುಂದಿನ ದಿನದಲ್ಲಿ ಸಹಕಾರ ಸಂಘ ಉತ್ತಮ ಕೆಲಸ ಮಾಡುವುದರ ಮೂಲಕ ಜನ ಮನ್ನಣೆ ಪಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಜಂಗಮ ಸಮಾಜದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜನ ಸ್ವಾಮಿ, ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್‌ಜೆಪಿ) ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ, ನ್ಯಾಯವಾದಿ ಕೆ.ಎನ್.ವಿಶ್ವನಾಥಯ್ಯ, ಡಾ.ಪ್ರಭುದೇವ್, ಬಿ.ವಿಜಯಕುಮಾರ್, ಶಶಿಧರ್ ಬಾಬು, ಬಸವರಾಜ ಶಾಸ್ತ್ರಿ, ಲೀಲಾವತಿ, ಬಿ.ಎಂ.ಕರಿಬಸವಯ್ಯ, ಜಿ.ಎಂ ವಿರೇಶ್, ಶರಣಯ್ಯ, ಶಿವನಗೌಡ್ರು ಉಪಸ್ಥಿತರಿದ್ದರು.