ಶ್ರೀಗಂಧ ಬೆಳೆಯಿಂದ ರೈತರ ಅರ್ಥಿಕ ಸದೃಢತೆ

| Published : Mar 01 2024, 02:17 AM IST

ಸಾರಾಂಶ

ರೈತರ ಅರ್ಥಿಕ ಸದೃಢತೆಗೆ ಶ್ರೀಗಂಧ ಪೂರಕ ಬೆಳೆಯಾಗಿದ್ದು, ಶ್ರೀಗಂಧ ಬೆಳೆ ಬೆಳೆಯುವ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಾಮರಾಜನಗರರೈತರ ಅರ್ಥಿಕ ಸದೃಢತೆಗೆ ಶ್ರೀಗಂಧ ಪೂರಕ ಬೆಳೆಯಾಗಿದ್ದು, ಶ್ರೀಗಂಧ ಬೆಳೆ ಬೆಳೆಯುವ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿಲಾಗಿದ್ದ ಶ್ರೀಗಂಧ ಬೆಳೆಗಾರರ ಜೊತೆ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀಗಂಧ ಬೆಳೆಯುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಪ್ರವಾಸ ಮಾಡುತ್ತಿದ್ದು, ರೈತರ ಸಂಕಷ್ಟ ನಿವಾರಣೆಗಾಗಿ ಚಾಮರಾಜನಗರ ಜಿಲ್ಲೆಗೂ ಭೇಟಿ ನೀಡಿರುವುದು ಆರೋಗ್ಯಕಾರಿ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಶ್ರೀಗಂಧ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಕ್ರಮ ವಹಿಸಲಾಗುವುದು ಎಂದರು.

ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ ಹಾಗೂ ಮಾನವ-ಪ್ರಾಣಿಗಳ ಸಂಘರ್ಷ ನಿರಂತರವಾಗಿದ್ದು, ಇದರ ಹೊರತಾಗಿಯೂ ಸಹ ರೈತರು ತಮ್ಮ ಜಮೀನುಗಳಲ್ಲಿ ಇತರೆ ಬೆಳೆಗಳ ಜೊತೆಗೆ ಶ್ರೀಗಂಧ ಬೆಳೆಯುವಂತೆ ಜಾಗೃತಿ (ಐಇಸಿ) ಚಟುವಟಿ ಕೆಗಳ ಮೂಲಕ ಉತ್ಸಾಹಿ ರೈತರನ್ನು ಪ್ರೇರೇಪಿಸಬೇಕಾಗಿದೆ. ಜಿಲ್ಲೆಯ ೧೬ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ರೈತರು ಹಾಗೂ ರೈತ ಮಹಿಳೆಯರನ್ನು ಸೇರಿಸಿ ಶ್ರೀಗಂಧ ಬೆಳೆಯುವ ಕುರಿತು ಸೂಕ್ಷ್ಮ ಕಾರ್ಯಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನರೇಗಾದಡಿಯಲ್ಲಿ ಶ್ರೀಗಂಧ ಸಸಿಗಳ ಬೇಡಿಕೆ ಎಷ್ಟಿದೆ ಎಂಬುದರ ಮಾಹಿತಿ ಕಲೆಹಾಕಬೇಕು. ವೈಯಕ್ತಿಕ ಕಾಮಗಾರಿಗಳ ಪಟ್ಟಿಯಲ್ಲಿ ಒಂದು ವರ್ಷದ ಮೊದಲೇ ಶ್ರೀಗಂಧ ಸಸಿ ಪಡೆಯಲು ರೈತರು ನೋಂದಣಿಯಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಕ್ರಿಯಾಯೋಜನೆ ತಯಾರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಹಂತಗಳಲ್ಲಿಯೂ ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು. ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ಚಾಮರಾಜನಗರ ಮೈಸೂರಿನ ಅವಿಭಾಜ್ಯ ಅಂಗವಾಗಿದ್ದಾಗ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆ ಹೆಚ್ಚಾಗಿತ್ತು. ಈಗ ಅದರ ಸಂಖ್ಯೆ ಕ್ಷೀಣವಾಗಿದೆ. ದೀರ್ಘಕಾಲಿಕ ಬೆಳೆಯಾಗಿರುವ ಶ್ರೀಗಂಧ ಅತ್ಯಂತ ಬೆಲೆ ಬಾಳುವ ಮರವಾಗಿದ್ದು, ಸಾವಿರ ವರ್ಷಗಳವರೆಗೂ ಬೇಡಿಕೆ ಇರುತ್ತದೆ. ರೈತರು ಶ್ರೀಗಂಧ ಬೆಳೆಯುವುದರಿಂದ ಪರಿಸರ ಅಭಿವೃದ್ಧಿಯಾಗಲಿದೆ. ಒಂದು ಶ್ರೀಗಂಧ ಮರ ಒಂದು ಸಾವಿರ ಮರಗಳನ್ನು ಹುಟ್ಟು ಹಾಕಬಲ್ಲದು. ಶ್ರೀಗಂಧ ಬೆಳೆಯಲು ೨೦೦೧-೦೨ರಿಂದಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಶ್ರೀಗಂಧ ಬೆಳೆಯಲು ಜನರು ಭಯ ಬೀಳುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರ ನಡೆಸಿ ಶ್ರೀಗಂಧ ಬೆಳೆಯ ಉನ್ನತಿಗಾಗಿ ಭದ್ರಬುನಾದಿ ಹಾಕುತ್ತಿರುವ ಮೊದಲ ಮಹಿಳಾ ಜಿಲ್ಲಾಧಿಕಾರಿ ಶಿಲ್ಪಾನಾಗ್ ಎಂದರೆ ತಪ್ಪಾಗಲಾರದು. ಕೃಷಿ ಬೆಳೆಗಳ ಜೊತೆಗೆ ಶ್ರೀಗಂಧ ಬೆಳೆಯಲು ಅರಣ್ಯ ಇಲಾಖೆ ರೈತರಿಗೆ ಅನುಮತಿ ನೀಡಿ ನೆರವಾಗಬೇಕು. ಶ್ರೀಗಂಧವನ್ನು ತೋಟಗಾರಿಕಾ ಬೆಳೆಯಾಗಿಸಲು ಸರ್ಕಾರದಿಂದ ಅನುಮತಿ ನಿರೀಕ್ಷಿಸಲಾಗಿದೆ. ಕೃಷಿ ಅರಣ್ಯ ಯೋಜನೆ ಜಾರಿಗೊಂಡಿದ್ದರೂ ಅನೇಕ ರೈತರಿಗೆ ಶ್ರೀಗಂಧ ಬೆಳೆಯ ಬಗ್ಗೆ ಅರಿವಿನ ಕೊರತೆ ಇದೆ. ರೈತರಿಗೆ ಶ್ರೀಗಂಧ ಮರ ಕತ್ತರಿಸಲು, ಸಾಗಾಣಿಕೆ, ಶೇಖರಣೆ ಹಾಗೂ ಮಾರಾಟ ಮಾಡಲು ನಿರ್ಬಂಧವಿದೆ. ಈ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಮರನಾರಾಯಣ ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಇತರೆ ಜಿಲ್ಲೆಯಿಂದ ಆಗಮಿಸಿದ್ದ ರೈತರೊಂದಿಗೆ ಶ್ರೀಗಂಧ ಬೆಳೆ, ಕಟಾವು, ಮಾರಾಟ, ಸಂವಾದ ನಡೆಯಿತು. ರೈತರು ಶ್ರೀಗಂಧ ಬೆಳೆಯಲು ಇರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಅಧಿಕಾರಿಗಳು ಕೂಡ ರೈತರಿಗೆ ಹಲವು ಪರಿಹಾರೋಪಾಯಗಳನ್ನು ತಿಳಿಸಿದರು.ಜಿಪಂ ಸಿಇಒ ಆನಂದ್‌ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ನಿವೃತ್ತ ಐಪಿಎಸ್ ಅಧಿಕಾರಿ ಯು.ಶರಣಪ್ಪ, ಬಸವರಾಜಪ್ಪ ಮತ್ತಿತರರು ಸಮಾಲೋಚನೆಯಲ್ಲಿ ಉಪಸ್ಥಿತರಿದ್ದರು. ರೈತರೊಂದಿಗೆ ಸಂವಾದಕ್ಕೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದ ಅವರಣದಲ್ಲಿ ಗಣ್ಯರು ಶ್ರೀಗಂಧ ಸಸಿ ನೆಟ್ಟು ನೀರೆರೆದರು.