ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ದಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಎಂಬಿಎ) ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಪಿಜಿ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು.ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ ಚಂದ್ರ ಲಹೋಟಿ ಸಮಾರಂಭ ಉದ್ಘಾಟಿಸಿ ವಿನೂತನ ಆಲೋಚನೆಗಳೇ ನಿಮ್ಮ ಭವಿಷ್ಯದ ಮೆಟ್ಟಿಲುಗಳು. ಇಂದು ಬಹಳ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನವ ಉದ್ಯಮಿಗಳೆ ನಾಳೆಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾರೆ. ಹೊಸ ಹೊಸ ಆಲೋಚನೆಗಳು ಹೊಸತನವನ್ನು ತರುತ್ತವೆ ನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂದರು.
ವಿದ್ಯಾರ್ಥಿಗಳು ಓದು ಮುಗಿದ ನಂತರ ಕೆಲಸಕ್ಕಾಗಿ ಹುಡುಕುವ ಮನೋಭಾವವನ್ನು ತೊರೆದು ಹೊರ ಜಗತ್ತಿಗೆ ತೆರೆದುಕೊಳ್ಳಿ ಎಷ್ಟೇ ಓದಿದರು ಕೆಲಸ ಸಿಗುತ್ತಿಲ್ಲ ಎಂದು ಕೊರಗುವ ಬದಲು ನೀವೇ ಕೆಲಸವನ್ನು ಸೃಷ್ಟಿಸಿ ಇತರರಿಗೆ ಉದ್ಯೋಗವನ್ನು ನೀಡುವಂತೆ ಬೆಳೆಯಬೇಕು. ಉದ್ಯೋಗ ಸೃಷ್ಟಿಸುವವರಾಗಬೇಕೆ ಹೊರತು ಉದ್ಯೋಗವನ್ನು ಹುಡುಕುವರಾಗಬಾರದು. ಇತ್ತೀಚಿನ ದಿನಗಳನ್ನು ವಿಶಿಷ್ಟ ಆಲೋಚನೆಗಳೊಂದಿಗೆ ಯುವಜನತೆ ಸ್ಟಾರ್ಟ್ ಅಪ್‌ಗಳಂತಹ ನವೋದ್ಯಮ ಹೊರಬರಲು ಸಾಧ್ಯವಾಗಿದೆ ಎಂದರು.ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಾರೆ. ಆದರೆ ಸರ್ಕಾರ ಎಲ್ಲರಿಗೂ ಉದ್ಯೋಗವನ್ನು ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಎಫ್‌ಕೆಸಿಸಿಐ ವತಿಯಿಂದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯಮಿಗಳಾಗಿ ದೇಶಕ್ಕೆ ಕೊಡುಗೆ ನೀಡಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೈನ್ ಸಿಎಂಎಸ್ ಬ್ಯುಸಿನೆಸ್ ಸ್ಕೂಲ್‌ನ ಡೀನ್ ಡಾ. ಹೆರಾಲ್ಡ್ ಆಂಡ್ರೋ ಪ್ಯಾಟ್ರಿಕ್ ಮಾತನಾಡಿ, ವಿದ್ಯಾರ್ಥಿಗಳು ಆಲಸ್ಯವನ್ನು ಬಿಟ್ಟು ಕೌಶಲ್ಯ ಮತ್ತು ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳಿರುವ ಶಕ್ತಿ ನಾವು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದರು.ಸಾಹೇ ಉಪಕುಲಪತಿ ಡಾ.ಕೆ.ಬಿ. ಲಿಂಗೇಗೌಡ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ, ಎಂಬಿಎ ವಿಭಾಗದ ಪ್ರಾಂಶುಪಾಲರಾದ ಡಾ.ಬಿ. ಅಜಮತುಉಲ್ಲಾ, ಎಸ್‌ಎಸ್‌ಐಎಂಎಸ್ ಸಹಾಯಕ ಆಡಳಿತಾಧಿಕಾರಿ ಕಲಂದರ್ ಪಾಷ, ಎಂಬಿಎ ವಿಭಾಗದ ಪ್ರಾಧ್ಯಾಪಕರಾದ ಡಾ. ಶೋಭಾ, ಡಾ. ರಾಜೇಶ್ವರಿ, ಪ್ರೇಮಾಕುಮಾರಿ, ಪಲ್ಲವಿ, ಸ್ಮಿತಾ, ಡಾ. ಚಂದನ, ಹೇಮಂತ್ ಕುಮಾರ್, ಅಹಮದ್, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.