ಆನ್‌ಲೈನ್ ಗೇಮಿಂಗ್ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ಗೆ ಸೇರಿದ್ದ 16 ಸ್ಥಳಗಳ ಮೇಲೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆನ್‌ಲೈನ್ ಗೇಮಿಂಗ್ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ಗೆ ಸೇರಿದ್ದ 16 ಸ್ಥಳಗಳ ಮೇಲೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.

ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಗೇಮ್ಸ್‌ ಕ್ರಾಫ್ಟ್‌ ಸೇರಿದ್ದ ಬೆಂಗಳೂರಿನ 12 ಕಡೆ ಹಾಗೂ ದೆಹಲಿಯ 4 ಕಡೆ ಸೇರಿ ಒಟ್ಟು 16 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ರಮ್ಮಿ ಕಲ್ಚರ್ ಆ್ಯಪ್ ಮೂಲಕ ಬೃಹತ್ ವಂಚನೆ ಪ್ರಕರಣದ ಸಂಬಂಧ ದೆಹಲಿಯಲ್ಲಿ ಎಫ್ಐಆರ್‌ಗಳು ದಾಖಲಾಗಿದ್ದು, ಇದನ್ನು ಆಧರಿಸಿ ಬೆಂಗಳೂರು ಘಟಕದ ಇ.ಡಿ ಅಧಿಕಾರಿಗಳು ಗೇಮ್ಸ್‌ ಕ್ರಾಫ್ಟ್‌ ಕಂಪನಿ ಮೇಲೆ ದಾಳಿ ಮಾಡಿದ್ದಾರೆ.

ಗೇಮ್ಸ್‌ ಕ್ರಾಫ್ಟ್‌ ಕಂಪನಿಯು ರಮ್ಮಿ ಕಲ್ಚರ್ ಎಂಬ ಆ್ಯಪ್ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು. ರಮ್ಮಿ ಕಲ್ಚರ್ ಆ್ಯಪ್‌ನ ವ್ಯವಹಾರಗಳಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ಈ ಆ್ಯಪ್‌ನ ಪ್ರಮುಖ ನಿರ್ವಾಹಕರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಳಿಯ ವೇಳೆ ಇ.ಡಿ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ಎಫ್‌ಐಆರ್ ಆಧರಿಸಿ ಕ್ರಮ:

ರಮ್ಮಿ ಕಲ್ಚರ್ ಆ್ಯಪ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತರು ದೆಹಲಿಯಲ್ಲಿ ನೀಡಿದ ದೂರುಗಳ ಅನ್ವಯ ಅಲ್ಲಿನ ಪೊಲೀಸರು ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್‌ಗಳಲ್ಲಿನ ಗಂಭೀರ ಆರೋಪಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈ ಬೃಹತ್ ಕಾರ್ಯಾಚರಣೆ ಕೈಗೊಂಡಿದೆ.