ಪಬ್‌ನಲ್ಲಿ ಅಶ್ಲೀಲ ಸನ್ನೆ ಮಾಡಿ ವಿವಾದಕ್ಕೀಡಾಗಿರುವ ಬಾಲಿವುಡ್ ನಟ ಶಾರೂಕ್‌ ಖಾನ್ ಪುತ್ರ ಆರ್ಯನ್‌ ಖಾನ್‌ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಬ್‌ನಲ್ಲಿ ಅಶ್ಲೀಲ ಸನ್ನೆ ಮಾಡಿ ವಿವಾದಕ್ಕೀಡಾಗಿರುವ ಬಾಲಿವುಡ್ ನಟ ಶಾರೂಕ್‌ ಖಾನ್ ಪುತ್ರ ಆರ್ಯನ್‌ ಖಾನ್‌ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು, ಆರ್ಯನ್ ಖಾನ್‌ ವಿರುದ್ಧ ಕೇಳಿ ಬಂದಿರುವ ಅಸಭ್ಯ ವರ್ತನೆ ಆರೋಪ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕೆಲ ದಿನಗಳ ಹಿಂದೆ ಎಂ.ಜಿ.ರಸ್ತೆ ಸಮೀಪ ಪಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರ್ಯನ್ ಖಾನ್‌, ಸಭಿಕರತ್ತ ಅಶ್ಲೀಲ ಸನ್ನೆ ಮಾಡಿದ್ದ ವಿಡಿಯೋ ಬಹಿರಂಗವಾಗಿ ವೈರಲ್ ಆಗಿತ್ತು.

ಸ್ವಯಂ ಪ್ರೇರಿತ ದೂರು:

ಈ ಘಟನೆ ಸಂಬಂಧ ಈವರೆಗೆ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರಿಂದ ಸ್ವಯಂ ಪ್ರೇರಿತ ದೂರು ಪಡೆಯಲಾಗಿದೆ. ಪಬ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಗಿದ್ದು, ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚಿ ಹೇಳಿಕೆ ಪಡೆಯಲಾಗುತ್ತದೆ. ಪ್ರಾಥಮಿಕ ವಿಚಾರಣೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.