‘ಕೈ’ ಶಾಸಕ ಭರತ್‌ರೆಡ್ಡಿ ಮನೆ ಮೇಲೆ ಇಡಿ ದಾಳಿ

| Published : Feb 11 2024, 01:46 AM IST

ಸಾರಾಂಶ

ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಅವರು ಮತ್ತು ಅವರ ಸಂಬಂಧಿಕರು, ಆಪ್ತರ ಮನೆ ಕಚೇರಿ ಸೇರಿ ಒಟ್ಟು 13ಕ್ಕೂ ಹೆಚ್ಚು ಕಡೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಶನಿವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಅವರು ಮತ್ತು ಅವರ ಸಂಬಂಧಿಕರು, ಆಪ್ತರ ಮನೆ ಕಚೇರಿ ಸೇರಿ ಒಟ್ಟು 13ಕ್ಕೂ ಹೆಚ್ಚು ಕಡೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಶನಿವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಭರತ್‌ ರೆಡ್ಡಿ ಜತೆಗೆ ಅವರ ತಂದೆ ಮಾಜಿ ಶಾಸಕರೂ ಆಗಿರುವ ನಾರಾ ಸೂರ್ಯನಾರಾಯಣ ರೆಡ್ಡಿ, ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಸೇರಿ ಶಾಸಕರ ಆಪ್ತರು, ಸಹೋದರ ಸಂಬಂಧಿಗಳ ಮನೆಗಳಲ್ಲೂ ಇ.ಡಿ. ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಬೆಳಗ್ಗೆ 6 ಗಂಟೆಗೆ ಕೇಂದ್ರ ಭದ್ರತಾ ಸಿಬ್ಬಂದಿಯೊಂದಿಗೆ(ಸಿಆರ್‌ಪಿಎಫ್‌) ಏಳು ಖಾಸಗಿ ಟ್ರಾವೆಲ್ಸ್‌ನ ವಾಹನಗಳೊಂದಿಗೆ ಇಲ್ಲಿನ ನೆಹರು ಕಾಲನಿಯಲ್ಲಿರುವ ಶಾಸಕ ಭರತ್ ರೆಡ್ಡಿ ನಿವಾಸಕ್ಕೆ ಆಗಮಿಸಿದ 20ಕ್ಕೂ ಹೆಚ್ಚು ಮಂದಿ ಇದ್ದ ಇ.ಡಿ. ಅಧಿಕಾರಿಗಳು ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಇದೇ ಸಮಯದಲ್ಲಿ ಗಾಂಧಿನಗರದಲ್ಲಿರುವ (ಮೋಕಾ ರಸ್ತೆ) ಶಾಸಕರ ಕಚೇರಿ, ಶಾಸಕರ ತಂದೆ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿ, ಚಿಕ್ಕಪ್ಪ ಪ್ರತಾಪ ರೆಡ್ಡಿ ಅವರ ಕಚೇರಿ ಹಾಗೂ ನಿವಾಸ, ಶಾಸಕ ಆಪ್ತ ರತ್ನಬಾಬು, ಸತೀಶ್ ರೆಡ್ಡಿ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಭರತ್ ರೆಡ್ಡಿ, ತಂದೆ ಹಾಗೂ ಚಿಕ್ಕಪ್ಪನ ಮನೆ-ಕಚೇರಿಗಳ ಮೇಲೆ ದಾಳಿ ಸಂಜೆವರೆಗೂ ಮುಂದುವರಿದಿತ್ತು. ಶಾಸಕರ ಮನೆ-ಕಚೇರಿ ಸೇರಿ ಆಪ್ತರ ನಿವಾಸಗಳಲ್ಲಿ ನಗದು ಸೇರಿ ಅನೇಕ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇ.ಡಿ. ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ದಾಳಿ ವೇಳೆ ಮನೆಯಲ್ಲಿದ್ದ ಕಂಪ್ಯೂಟರ್‌ಗಳನ್ನು ಜಾಲಾಡಿದ್ದು, ವಾಹನಗಳನ್ನೂ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಭರತ್ ರೆಡ್ಡಿ ಹಾಗೂ ಸೂರ್ಯನಾರಾಯಣ ರೆಡ್ಡಿ ಮನೆಯಲ್ಲಿದ್ದರೆ, ಚಿಕ್ಕಪ್ಪ ಪ್ರತಾಪ ರೆಡ್ಡಿ ಕಲಬುರಗಿಯಲ್ಲಿದ್ದರು ಎಂದು ತಿಳಿದುಬಂದಿದೆ.

ಗ್ರಾನೈಟ್‌ ಉದ್ಯಮಿ:

ಶಾಸಕ ಭರತ್ ರೆಡ್ಡಿ ಕುಟುಂಬ ಅನೇಕ ವರ್ಷಗಳಿಂದ ಗ್ರಾನೈಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಬಳ್ಳಾರಿ, ಕೊಪ್ಪಳ, ಚೆನ್ನೈ, ಬೆಂಗಳೂರು, ಆಂಧ್ರಪ್ರದೇಶದ ವೊಂಗಲ್‌ ಸೇರಿ ಅನೇಕ ಕಡೆ ಇವರ ವ್ಯವಹಾರವಿದೆ. ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಆಗಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಆಂಧ್ರ, ತ.ನಾಡು, ಬೆಂಗ್ಳೂರಲ್ಲೂ ದಾಳಿ

ಬಳ್ಳಾರಿ ಮಾತ್ರವಲ್ಲದೆ ಕೊಪ್ಪಳದ ಕುಕನೂರು, ಬೆಂಗಳೂರು, ಚೆನ್ನೈ, ಆಂಧ್ರಪ್ರದೇಶದ ವೊಂಗಲ್‌ ನಲ್ಲೂ ಇ.ಡಿ.ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕುಕನೂರು ಪಟ್ಟಣದಲ್ಲಿರುವ ಭರತ ರೆಡ್ಡಿ ಅವರ ತಂದೆ ಸೂರ್ಯನಾರಾಯಣರೆಡ್ಡಿ ಗ್ರಾನೈಟ್ ಗಣಿ ಕಂಪನಿಯಾದ ರಾಘವೇಂದ್ರ ಎಂಟರ್‌ಪ್ರೈಸಸ್ ನಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ.