ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ನಂಟು ಇದೀಗ ಮಸ್ಕಿ ತಾಲೂಕಿಗೂ ತಟ್ಟಿದೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿರುವ ಪಶುವೈದ್ಯಾಧಿಕಾರಿ ಅಮರೇಗೌಡ ವಿರುಪಾಪುರ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಕಡಬೂರಿನಲ್ಲಿ ಕಾರ್ಯಾಚರಣೆ । ಮಸ್ಕಿ ತಾಲೂಕಿಗೂ ಅಂಟಿದ ಕೆಪಿಎಸ್ಸಿ ಅಕ್ರಮದ ನಂಟು
-------ಕನ್ನಡಪ್ರಭ ವಾರ್ತೆ ಮಸ್ಕಿ
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯ ನಂಟು ಇದೀಗ ಮಸ್ಕಿ ತಾಲೂಕಿಗೂ ತಟ್ಟಿದೆ. ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿರುವ ಪಶುವೈದ್ಯಾಧಿಕಾರಿ ಅಮರೇಗೌಡ ವಿರುಪಾಪುರ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ನಡೆದ ಕಾರ್ಯಾಚರಣೆಯ ಭಾಗವಾಗಿ ಚಿಕ್ಕಕಡಬೂರಿಗೆ ಆಗಮಿಸಿದ ಇಡಿ ಅಧಿಕಾರಿಗಳ ತಂಡ, ಇಬ್ಬರು ಸಿಆರ್‌ಪಿಎಫ್ ಯೋಧರ ಭದ್ರತೆಯಲ್ಲಿ ಹಲವು ಗಂಟೆಗಳ ಕಾಲ ಮನೆಯಲ್ಲಿದ್ದ ದಾಖಲೆಗಳು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲಿಸಿದೆ ಎಂದು ತಿಳಿದುಬಂದಿದೆ.
ವ್ಯವಹಾರ ಪರಿಶೀಲನೆ: ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು, ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ನಡುವಿನ ಸಂಪರ್ಕ, ಅಕ್ರಮದ ಹಿಂದೆ ಕಾರ್ಯನಿರ್ವಹಿಸಿರುವ ಜಾಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಮಾಹಿತಿ ಕಲೆಹಾಕುವ ಉದ್ದೇಶದಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಯ ವೇಳೆ ಯಾವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಅಥವಾ ಯಾವುದೇ ಮಹತ್ವದ ಮಾಹಿತಿ ಸಿಕ್ಕಿದೆಯೇ ಎಂಬುದರ ಕುರಿತು ಇಡಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ.ಚಿಕ್ಕಕಡಬೂರು ಗ್ರಾಮದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ ಮಸ್ಕಿ ತಾಲೂಕವರೆಗೂ ವಿಸ್ತರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ಮುಂದಿನ ಕ್ರಮ ಹಾಗೂ ತನಿಖೆಯಲ್ಲಿ ಹೊರಬರುವ ಅಂಶಗಳತ್ತ ಇದೀಗ ಮಸ್ಕಿ ತಾಲೂಕಿನ ಜನರ ಗಮನ ನೆಟ್ಟಿದೆ.-----ಫೋಟೊ----------
18ಕೆಪಿಎಂಎಸ್ಕೆ01:ಮಸ್ಕಿ ತಾಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿರುವ ಪಶುವೈದ್ಯಾಧಿಕಾರಿ ಅಮರೇಗೌಡ ವಿರುಪಾಪುರ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿರುವುದು.