ಶಾಸಕ ಸೈಲ್‌ಗೆ ಮತ್ತೆ ಶಾಕ್‌: ₹21 ಕೋಟಿ ಆಸ್ತಿ ಇ.ಡಿ ವಶ

| Published : Nov 09 2025, 02:30 AM IST

ಸಾರಾಂಶ

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌) ಅಡಿ ಕಾಂಗ್ರೆಸ್‌ ಶಾಸಕ ಸತೀಶ್‌ ಕೃಷ್ಣ ಸೈಲ್‌ ಅವರ 21 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.

- ಬೇಲೆಕೇರಿ ಅದಿರು ಅಕ್ರಮ ಸಾಗಣೆ ಕೇಸಲ್ಲಿ ಜಪ್ತಿ

- ಗೋವಾ ಆಸ್ತಿಗಳ ಮಾರುಕಟ್ಟೆ ಮೌಲ್ಯ 64 ಕೋಟಿ!

---

ಪೂರೈಕೆದಾರರಿಂದ ಅದಿರು ಖರೀದಿಸಿ ಅದನ್ನು ಗೋವಾ ಕಂಪನಿ ಮೂಲಕ ವಿದೇಶಕ್ಕೆ ಸಾಗಿಸಿದ ಆರೋಪ

ಸೈಲ್‌ಗೆ ಸೇರಿದ ಗೋವಾ ಮೂಲದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಆಸ್ತಿ ಜಪ್ತಿಇದರಲ್ಲಿ 12500 ಚ.ಮೀ ಭೂಮಿ, 16850 ಚ.ಮೀ. ಕೃಷಿ ಆಸ್ತಿ, ಬಹುಮಹಡಿಗಳ ವಾಣಿಜ್ಯ ಕಟ್ಟಡ ಸೇರಿದೆ

ವಶಪಡಿಸಿಕೊಂಡ ಆಸ್ತಿಯ ಮಾರುಕಟ್ಟೆಯ ಮೌಲ್ಯ ಅಂದಾಜು 64 ಕೋಟಿ ರು. ಎಂದು ಅಂದಾಜಿಸಲಾಗಿದೆ

==ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌) ಅಡಿ ಕಾಂಗ್ರೆಸ್‌ ಶಾಸಕ ಸತೀಶ್‌ ಕೃಷ್ಣ ಸೈಲ್‌ ಅವರ 21 ಕೋಟಿ ರು. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.

ಸತೀಶ್‌ ಸೈಲ್‌ಗೆ ಸೇರಿದ, ಗೋವಾ ಮೂಲದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌(ಎಸ್ಎಂಎಸ್‌ಪಿಎಲ್‌) ಕಂಪನಿಯ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಕಬ್ಬಿಣದ ಅದಿರು ಅಕ್ರಮ ಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ ಸೆಪ್ಟೆಂಬರ್‌ನಲ್ಲಿ ಇ.ಡಿ. ಅಧಿಕಾರಿಗಳು ಸತೀಶ್‌ ಸೈಲ್‌ ಅವರನ್ನು ಬಂಧಿಸಿದ್ದರು. ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಸತೀಶ್ ಸೈಲ್‌ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಶುಕ್ರವಾರ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು ರದ್ದುಗೊಳಿಸಿದೆ.

ಗೋವಾದ ಮರ್ಮಗೋವಾದ ಚಿಕಾಲಿಮ್ ಗ್ರಾಮದಲ್ಲಿ 12,500 ಚದರ ಮೀಟರ್ ಭೂಮಿ, ದಕ್ಷಿಣ ಗೋವಾದಲ್ಲಿರುವ ಪೆಡ್ರೊ ಗ್ಯಾಲೆ ಕೋಟಾ ಎಂದು ಕರೆಯುವ 16,850 ಚದರ ಮೀಟರ್ ಕೃಷಿ ಆಸ್ತಿ ಮತ್ತು ಗೋವಾದ ವಾಸ್ಕೋ ಡ ಗಾಮಾದಲ್ಲಿರುವ ಬಹುಮಹಡಿಗಳ ವಾಣಿಜ್ಯ ಕಟ್ಟಡ ಜಪ್ತಿ ಮಾಡಲಾದ ಆಸ್ತಿಗಳಲ್ಲಿ ಸೇರಿವೆ. ಇವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 64 ಕೋಟಿ ರು. ಇದೆ ಎನ್ನಲಾಗಿದೆ. ಇ.ಡಿ. ಪ್ರಕಾರ ಈ ಆಸ್ತಿಗಳ ಪ್ರಸಕ್ತ ಮೌಲ್ಯ 21 ಕೋಟಿ ರು. ಎಂದು ಅಂದಾಜಿಸಲಾಗಿದೆ.

ಲೋಕಾ ತನಿಖೆಯಲ್ಲಿ ಅಕ್ರಮ ಬೆಳಕಿಗೆ:

ಸತೀಶ್‌ ಸೈಲ್‌ ಅವರ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಆರೋಪಕ್ಕೆ ಗುರಿಯಾಗಿದೆ. 2010ರಲ್ಲಿ ಲೋಕಾಯುಕ್ತ ನಡೆಸಿದ ತನಿಖೆಯಲ್ಲಿ ಈ ಅಕ್ರಮ ಅದಿರು ಸಾಗಣೆ ಬೆಳಕಿಗೆ ಬಂದಿತ್ತು. ಬಳ್ಳಾರಿಯಿಂದ ಬೇಲೆಕೇರಿ ಬಂದರಿಗೆ ಸುಮಾರು ಎಂಟು ಲಕ್ಷ ಟನ್‌ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿರುವುದನ್ನು ಪತ್ತೆಹಚ್ಚಿತ್ತು.

ಲೋಕಾಯುಕ್ತ ಮಾಹಿತಿ ಮೇರೆಗೆ ಇ.ಡಿ. ಸತೀಶ್ ಸೈಲ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಕಳೆದ ಆ.13 ಮತ್ತು 14ರಂದು ಕಾರವಾರ, ಗೋವಾ, ಮುಂಬೈ ಹಾಗೂ ದೆಹಲಿಯಲ್ಲಿ ಸತೀಶ್‌ ಸೈಲ್‌ಗೆ ಸಂಬಂಧಿಸಿದ ಕಚೇರಿ, ಮನೆಗಳು ಹಾಗೂ ಕಟ್ಟಡಗಳ ಮೇಲೆ ದಾಳಿ ನಡೆಸಿತ್ತು.

ಅಕ್ರಮವಾಗಿ ಚೀನಾಗೆ ರಫ್ತು:

ಸತೀಶ್‌ ಸೈಲ್‌ ಅವರು ಕಬ್ಬಿಣದ ಅದಿರು ಪೂರೈಕೆದಾರರಿಂದ ಸುಮಾರು 1.54 ಲಕ್ಷ ಮೆಟ್ರಿಕ್‌ ಟನ್‌ ಖರೀದಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸತೀಶ್‌ ಸೈಲ್‌ ಅವರು ಬಂದರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕೊಲಂಬಿಯಾ ಮತ್ತು ಮ್ಯಾಂಡರಿನ್‌ ಹಾರ್ವೆಸ್ಟ್‌ ನಂತಹ ಹಡಗುಗಳ ಮುಖಾಂತರ ಕಬ್ಬಿಣದ ಅದಿರನ್ನು ಚೀನಾಕ್ಕೆ ರಫ್ತು ಮಾಡಿದ್ದಾರೆ. ಅಲ್ಲದೆ, ಹಾಂಕಾಂಗ್‌ನಲ್ಲಿ ಮತ್ತೊಂದು ಕಂಪನಿ ತೆರೆದು ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ್ದಾರೆ ಎಂದು ಇ.ಡಿ. ತಿಳಿಸಿದೆ.

---