ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!

| Published : Sep 10 2025, 01:03 AM IST

ಸಾರಾಂಶ

ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ವಿರುದ್ಧದ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವಂಚನೆ ಪ್ರಕರಣದಲ್ಲಿ ಇ.ಡಿ.ಈವರೆಗೆ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ವಿರುದ್ಧದ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಈವರೆಗೆ ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ, ಐಷಾರಾಮಿ ಕಾರುಗಳು ಸೇರಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.

ಇ.ಡಿ.ಅಧಿಕಾರಿಗಳು ಸೆ.6ರಂದು ಚಳ್ಳಕೆರೆಯಲ್ಲಿ ಕೆ.ಸಿ.ವೀರೇಂದ್ರ ಹಾಗೂ ಸಂಬಂಧಿತರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ 24 ಕ್ಯಾರೆಟ್‌ನ 21.43 ಕೆ.ಜಿ. ಚಿನ್ನದ ಗಟ್ಟಿ, 10.985 ಕೆ.ಜಿ. ತೂಕದ ಚಿನ್ನ ಲೇಪಿತ 11 ಬೆಳ್ಳಿಗಟ್ಟಿಗಳು ಹಾಗೂ 1 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇವುಗಳ ಮೌಲ್ಯ ಸುಮಾರು ₹24 ಕೊಟಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಈವರೆಗೆ ಇ.ಡಿ.ಅಧಿಕಾರಿಗಳು ಆರೋಪಿ ಕೆ.ಸಿ.ವೀರೇಂದ್ರ ಅಕ್ರಮವಾಗಿ ಗಳಿಸಿದ ಸುಮಾರು ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ.

ಇದಕ್ಕೂ ಮುನ್ನ ಇ.ಡಿ. ಅಧಿಕಾರಿಗಳು ಆರೋಪಿ ಕೆ.ಸಿ.ವೀರೇಂದ್ರನ್ನು ಬಂಧಿಸಿ, 15 ದಿನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಕಡೆಯ ನಾಲ್ಕು ದಿನ ಹೆಚ್ಚಿನ ವಿಚಾರಣೆ ವೇಳೆ ಆರೋಪಿ ಕೆ.ಸಿ.ವೀರೇಂದ್ರ ಕಿಂಗ್‌ 567, ರಾಜಾ 567, ಪ್ಲೇ 567, ಪ್ಲೇವಿನ್‌ 567 ಇತ್ಯಾದಿ ಹೆಸರಿನಲ್ಲಿ ಹಲವು ಆನ್‌ಲೈನ್‌ ಬೆಟ್ಟಿಂಗ್‌ ಸೈಟ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಸೈಟ್‌ಗಳ ಮುಖಾಂತರ ಗಳಿಸಿದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಹಲವು ಗೇಟ್‌ ವೇಗಳನ್ನು ಬಳಸಿರುವುದು ಬಯಲಾಗಿದೆ.

ವಿದೇಶ ಪ್ರಯಾಣಕ್ಕೆ ಕೋಟ್ಯಂತರ ರು. ವೆಚ್ಚ:

ಆರೋಪಿ ಕೆ.ಸಿ.ವೀರೇಂದ್ರ, ಅವರ ಕುಟುಂಬದ ಸದಸ್ಯರು ಹಾಗೂ ಸಹಚರರು ವಿದೇಶಗಳಿಗೆ ಪ್ರಯಾಣಿಸಲು ಟಿಕೆಟ್‌ ಖರೀದಿಸಲು ಕೋಟ್ಯಂತರ ರು. ವಿನಿಯೋಗಿಸಿದ್ದಾರೆ. ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳಿಂದ ಬರುವ ಆದಾಯವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡು ಬಳಿಕ ಅದನ್ನು ವಿಮಾನ ಟಿಕೆಟ್‌ ಬುಕ್‌ ಮಾಡಲು ಬಳಸಿಕೊಂಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬಳಸಲಾದ ಹಣವನ್ನು ಅಕ್ರಮ ಆನ್‌ಲೈನ್ ಚಟುವಟಿಕೆಗಳಿಗೆ ತಿರುಗಿಸಲಾಗಿದೆ. ಈ ಹಣದ ಮೂಲವನ್ನು ಮರೆಮಾಚಲು ಮಧ್ಯವರ್ತಿಗಳ ಖಾತೆಗಳನ್ನು ಬಳಸಿಕೊಂಡಿರುವುದು ಸಾಕ್ಷಿಗಳಿಂದ ಬಯಲಾಗಿದೆ.

ಬಾಕ್ಸ್...

ಬೇನಾಮಿ ಹೆಸರಲ್ಲಿಐಷಾರಾಮಿ ಕಾರು

ಕೆ.ಸಿ.ವೀರೇಂದ್ರ ಮತ್ತು ಅವರ ಕುಟುಂಬ ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಬೇರೆ ವ್ಯಕ್ತಿಗಳು ಹಾಗೂ ಕಂಪನಿಗಳ ಹೆಸರಿನಲ್ಲಿ ನೋಂದಣಿ ಮಾಡಿರುವುದು ಇ.ಡಿ. ತನಿಖೆಯಲ್ಲಿ ಗೊತ್ತಾಗಿದೆ. ಈ ಪೈಕಿ ಮರ್ಸಿಡಿಸ್‌ ಬೆಂಜ್‌ (ಕೆಎ 55 ಪಿ0003) ಕಾರನ್ನು ಅನಿಲ್‌ ಗೌಡಗೆ ಸೇರಿದ ಎಬಿಎಚ್‌ ಇನ್ಫ್ರಾಸ್ಟ್ರಕ್ಚರ್‌ ಹೆಸರಿನಲ್ಲಿ ನೋಂದಣಿ ಮಾಡಲಾಗಿದೆ. ಕೆಎ 45 ಎನ್‌ 0003 ನೋಂದಣಿ ಸಂಖ್ಯೆಯ ರೇಂಜ್‌ ರೋವರ್‌ ಕಾರು ಖರೀದಿಗೆ ಫೋನ್‌ಪೈಸಾದ ಗುಲ್ಯನ್‌ ಖಟ್ಟರ್‌ ಎಂಬುವವರು ಹಣಕಾಸು ನೆರವು ನೀಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆ.ಸಿ.ವೀರೇಂದ್ರ ವಿರುದ್ಧದ ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.

---

ಚಿತ್ರ: ಸ್ಕ್ರೀನ್‌ ಶಾಟ್

ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ

ಶಾಸಕ ವಿರೇಂದ್ರ ಪಪ್ಪಿ ಬಳಿ ಅಪಾರ ಚಿನ್ನ ವಶ ಪಡಿಸಿಕೊಂಡಿದ್ದ ಬಗ್ಗೆ ಕನ್ನಡಪ್ರಭ ಸೆ.7ರಂದು ಪ್ರಕಟಿಸಿತ್ತು.