ಸುಮಾರು 24 ವರ್ಷಗಳ ನಂತರ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವನ್ನು ಆಚರಿಸಲು ತೀರ್ಮಾನಿಸಲಾಗಿದ್ದು, ಕುಟುಂಬದ ರೀತಿ ಎಲ್ಲರೂ ಸೇರಿಕೊಂಡು ಮಾದರಿ ಉತ್ಸವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸುಮಾರು 24 ವರ್ಷಗಳ ನಂತರ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವನ್ನು ಆಚರಿಸಲು ತೀರ್ಮಾನಿಸಲಾಗಿದ್ದು, ಕುಟುಂಬದ ರೀತಿ ಎಲ್ಲರೂ ಸೇರಿಕೊಂಡು ಮಾದರಿ ಉತ್ಸವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.

ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಾಹಿತಿಗಳು, ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಬುದ್ಧಿಜೀವಿಗಳು, ಮಹಿಳಾ ಪ್ರಮುಖರು, ಹೋರಾಟಗಾರರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಉತ್ಸವಗಳು ನಡೆಯುತ್ತವೆ, ಬಹು ದಶಕಗಳ ಬಳಿಕ ರಾಯಚೂರಿನಲ್ಲಿ ಉತ್ಸವ ಆಯೋಜಿ ಸಿದ್ದು, ಅದಕ್ಕೆ ಅಗತ್ಯವಾದ ಪೂರ್ವ ತಯಾರಿ ಕಾರ್ಯವು ಭರದಿಂದ ಸಾಗಿದೆ. ಇಂತಹ ಐತಿಹಾಸಿಕ ಉತ್ಸವನ್ನು ಮಾದರಿ ಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಾಗಿದ್ದು, ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು, ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಯಶಸ್ವಿ ಉತ್ಸವನ್ನು ಮಾಡೋಣ ಎಂದರು.

ಉತ್ಸವ ಆಚರಣೆಗೆ ಸರ್ಕಾರದಿಂದ 2 ಕೋಟಿ ರು. ಬಂದಿದ್ದು, ಪಾಲಿಕೆ, ಆರ್‌ಡಿಎಯಿಂದ ₹1 ಕೋಟಿ, ಹಟ್ಟಿಚಿನ್ನದಗಣಿ ಹಾಗೂ ಕೆಪಿಸಿಎಲ್‌ ಹಾಗೂ ಬೇರೆ ಮೂಲಗಳಿಂದ ಹಣ ಸಂಗ್ರಹಿಸಿ ಸುಮಾರು 4 ಕೋಟಿ ರು. ವೆಚ್ಚದಲ್ಲಿ ಉತ್ಸವ ಆಚರಿಸಲಾಗುತ್ತಿದೆ. ಯಾವ ರೀತಿಯಾಗಿ ಉತ್ಸವವನ್ನು ಆಚರಿಸಬೇಕು ಎನ್ನುವುದರ ಕುರಿತು ಕೇಳಿದ ಸಲಹೆ ಸೂಚನೆಗಳಿಗೆ ಸ್ಫೂರ್ತಿದಾಯಕ ಸ್ಪಂದನೆ ಲಭಿಸಿದೆ. ಈ ಎಲ್ಲ ಸಲಹೆಗಳನ್ನು ಪರಿಗಣಿ ಅಗತ್ಯ ವಿಚಾರಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ಉತ್ಸವ ಕೇವಲ ನಗರಕ್ಕೆ ಸೀಮಿತವಲ್ಲ ಜಿಲ್ಲೆಗೆ ಸೇರಿದ್ದಾಗಿದ್ದು, ಪ್ರತಿ ತಾಲೂಕಿನಲ್ಲಿ ಸಹ ಸಂಘ ಸಂಸ್ಥೆಗಳ ಸಭೆಗಳನ್ನು ತಹಸೀಲ್ದಾರ ಮತ್ತು ಇಒ ಸಮ್ಮುಖದಲ್ಲಿ ಮಾಡಿಸಲಾಗುವುದು, ಉತ್ಸವದ ಪೂರ್ವದಲ್ಲಿ ಏರ್‌ ಶೋ ಹಾಗೂ ಮುಂಚಿತ ಮೂರು ದಿನಗಳ ಕಾಲ ಮಕ್ಕಳ ಉತ್ಸವನ್ನು ಸಹ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಉತ್ಸವದ ರೂಪುರೇಷೆಗಳ ಕುರಿತು ವಿವರಣೆ ನೀಡಿದರು. ನಂತರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಮುಖಂಡರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು ಉತ್ಸವದಲ್ಲಿ ಸ್ಥಳೀಯ ಸಾಹಿತಿಗಳಿಗೆ,ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಹಾಗೂ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು. ಸಮಿತಿಗಳಲ್ಲಿ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮಗಳಲ್ಲಿ ಅವರನ್ನು ಭಾಗಿದಾರರನ್ನಾಗಿಸಿಕೊಳ್ಳಬೇಕು, ಕರ್ನಾಟಕ ಸಂಘದಿಂದ ಮೆರವಣಿಗೆ ನಡೆಸಬೇಕು, ಕೋಟೆ ಪ್ರದೇಶ, ವೃತ್ತ, ಗಣ್ಯರ ಪುತ್ಥಳಿ ಹಾಗೂ ಮುಖ್ಯ ಸ್ಥಳಗಳಿಗೆ ದೀಪಾಲಂಕಾರ ಮಾಡಬೇಕು. ಸ್ಮರಣ ಸಂಚಿಕೆಯನ್ನು ಪ್ರಕಟಿಸಬೇಕು, ಪ್ರಮುಖ ಐತಿಹಾಸಿಕ ಸ್ಥಳಗಳ ಭೇಟಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು, ಪ್ರತಿ ವರ್ಷ ಉತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸಲಹೆಗಳನ್ನು ನೀಡಿದರು.

ಅಷ್ಟೇ ಅಲ್ಲದೇ ಉತ್ಸವದಲ್ಲಿ ಮಾಧ್ಯಮಗೋಷ್ಠಿ, ದೇಹದಾರ್ಢ್ಯ ಸ್ಪರ್ಧೆ, ಪ್ರದರ್ಶನ ಏರ್ಪಡಿಸಬೇಕು, ಬಾಡಿಬಿಲ್ಡರ್ ಕಿರಣ ವಾಲ್ಮೀಕಿರನ್ನು ಕರೆಯಿಸಬೇಕು, ಜಿಲ್ಲೆಯ ಇತಿಹಾಸ ತಿಳಿಸುವ ಗೋಷ್ಠಿ, ಭಾವಚಿತ್ರಗಳು ರೂಪಿಸಬೇಕು, ಅಂತಾರಾಷ್ಟ್ರೀಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು, ರೈತರ ವಿಷಯಗಳಿಗೆ ಆಸ್ಪದಕೊಡಬೇಕು, ಸಂವಿಧಾನ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಗಳ ಕುರಿತು ಗೋಷ್ಠಿಗಳನ್ನೇರ್ಪಡಿಸಬೇಕು ಎಂದು ತಿಳಿಸಿದರು.

ಉತ್ಸವದಲ್ಲಿ ಪ್ರತಿ ಮನೆಯ ಹೆಣ್ಣುಮಕ್ಕಳು ಪಾಲ್ಗೊಳ್ಳುವ ಹಾಗೆ ಮಹಿಳಾ ಕಮಿಟಿ ರಚಿಸಿ ಅವಕಾಶ ನೀಡಬೇಕು. ಮಳಿಗೆಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಿಸಿ ವಸ್ತುಗಳ ಪ್ರದರ್ಶನ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ರಾಯಚೂರು ಜಿಲ್ಲೆಯು ವಚನ ಮತ್ತು ದಾಸ ಸಾಹಿತ್ಯಕ್ಕೆ ಹೆಸರಾಗಿದ್ದು, ದಲಿತ ಬಂಡಾಯ ಸಾಹಿತ್ಯ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಅನೇಕರು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಪಾಲಿಕೆಯ ಆಯುಕ್ತ ಜುಬಿನ್ ಮಹಾಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ ಸೇರಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸದಸ್ಯರು, ಮುಖಂಡರು, ಮಹಿಳೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.