ಮಕ್ಕಳಿಗೆ ಮಾನವೀಯ ಮೌಲ್ಯದ ಶಿಕ್ಷಣ ನೀಡಿ: ಕೆಪಿಸಿಸಿ ಸದಸ್ಯ ಸುರೇಶ್

| Published : Feb 17 2025, 12:31 AM IST

ಸಾರಾಂಶ

ಮಕ್ಕಳಿಗೆ ಆಧುನಿಕ ಹೈಟೆಕ್ ಸ್ಪರ್ಶದ ಶಿಕ್ಷಣ ಬೇಕು ಎನ್ನುವ ನೆಪದಲ್ಲಿ ಸಂಸ್ಕಾರಯುತ ಶಿಕ್ಷಣ ಮರೆಯುವಂತಾಗಿದೆ. ಮಕ್ಕಳಲ್ಲಿ ಮೊದಲು ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಶಿಕ್ಷಣ ಬೇಕಿದೆ. ಪ್ರಾಮಾಣಿಕತೆ, ಸಂಸ್ಕಾರ ಕಲಿತರೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಓದು ಬರಹಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಮಾನವೀಯ ಮೌಲ್ಯದ ಶಿಕ್ಷಣ ಕೊಡಲು ಶಿಕ್ಷಕರು ಮುಂದಾಗಬೇಕು ಎಂದು ಕೆಪಿಸಿಸಿ ಸದಸ್ಯ ಸುರೇಶ್ ಹೇಳಿದರು.

ಅಂಕನಹಳ್ಳಿಯ ಕುಟೀರ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ಆಧುನಿಕ ಹೈಟೆಕ್ ಸ್ಪರ್ಶದ ಶಿಕ್ಷಣ ಬೇಕು ಎನ್ನುವ ನೆಪದಲ್ಲಿ ಸಂಸ್ಕಾರಯುತ ಶಿಕ್ಷಣ ಮರೆಯುವಂತಾಗಿದೆ. ಮಕ್ಕಳಲ್ಲಿ ಮೊದಲು ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಶಿಕ್ಷಣ ಬೇಕಿದೆ. ಪ್ರಾಮಾಣಿಕತೆ, ಸಂಸ್ಕಾರ ಕಲಿತರೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲಿದೆ ಎಂದರು.

ಶಿಕ್ಷಣ ಕೇವಲ ಅಂಕಗಳಿಸುವ ಕಾರ್ಖಾನೆಯಾಗಬಾರದು. ನಮ್ಮ ನಡೆ, ನುಡಿ ಬದುಕಿಗೆ ದಾರಿ ದೀಪವಾಗಲಿದೆ. ವಿದ್ಯಾವಂತರು ಹೆಚ್ಚುತ್ತಿರುವುದು ಆರೋಗ್ಯಕರ. ಆದರೆ, ಇದರ ಜೊತೆಗೆ ಒತ್ತಡದ ಕೆಲಸವಿದೆ ಎಂದು ಮಕ್ಕಳನ್ನು ಹಿರಿಯರನ್ನು ಪೋಷಿಸಲು ಕಷ್ಟವೆಂದು ವೃದ್ಧಾಶ್ರಮಕ್ಕೆ ದೂಡುವ ಕೆಲಸವೂ ಆಗುತ್ತಿದೆ ಬೇಸರ ವ್ಯಕ್ತಪಡಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಾಲಾ ಹಬ್ಬ ಟಾನಿಕ್‌ನಂತೆ ಕೆಲಸ ಮಾಡಲಿದೆ ಎಂದರು.

ಹಾಸ್ಯ ಕಲಾವಿದ ರಘು ಮಿಮಿಕ್ರಿ, ಹಾಸ್ಯ ಚಟಾಕಿ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮಕ್ಕಳಿಂದ ಆಕರ್ಷಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಇದೇ ವೇಳೆ ವಾಂಟೆಡ್ ಚಲನಚಿತ್ರದ ಟೀಜರ್ ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಪೋಷಕರಿಗೆ, ಮಕ್ಕಳಿಗೆ ಬಹುಮಾನ ನೀಡಲಾಯಿತು.

ಈ ವೇಳೆ ಕೆರೆಗೋಡು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕುಮಾರ್, ಸಹ ಪ್ರಾಧ್ಯಾಪಕ ಕುಮಾರ್, ಮೆಂಬರ್ ಮಂಜೇಗೌಡ, ಎ.ಎನ್. ನಂಜುಂಡೇಗೌಡ, ಶಿವಕುಮಾರ್, ಜಾನೇಗೌಡ, ಮುಖ್ಯಶಿಕ್ಷಕಿ ಸಿ.ಜೆ. ಆಶಾ, ಮಮತಾ, ಪುಷ್ಪಲತಾ, ಕುಮಾರಿ, ಕಾವ್ಯ, ಅರ್ಪಿತಾ, ಶ್ವೇತಾ, ಸುಶ್ಮಿತಾ, ನಟಿ ಅಕ್ಷತಾ, ಲಕ್ಷ್ಮೀ, ಸುನಿಲ್, ಜೀವನ್‌ಗೌಡ ಇದ್ದರು.