ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ನೀಡಿ: ಸಚಿವ ಮಂಕಾಳ ವೈದ್ಯ

| Published : Jan 16 2024, 01:45 AM IST

ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ನೀಡಿ: ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿಕ್ಕರೆ ಶಿಕಾರಿ, ಸಿಗದಿದ್ದರೆ ಬಿಕಾರಿ ಎನ್ನುವುದು ಮೀನುಗಾರಿಕೆ ವೃತ್ತಿಯಲ್ಲಿನ ಗಳಿಕೆಯ ಬಗ್ಗೆ ಮೀನುಗಾರರಲ್ಲಿ ಮೊದಲಿನಿಂದಲೂ ಆತಂಕ ಇದೆ. ಅದು ಈಗ ಇನ್ನಷ್ಟು ಹೆಚ್ಚಾಗಿದೆ. ಮೀನಿನ ಬರ ಇದನ್ನು ಸಾರಿ ಸಾರಿ ಹೇಳುತ್ತಿದೆ.

ಹೊನ್ನಾವರ:ಮುಂದಿನ ಪೀಳಿಗೆಯ ಸಮಗ್ರ ಹಿತದೃಷ್ಟಿಯಿಂದ ಮೀನುಗಾರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಚಿವ ಮಂಕಾಳ ವೈದ್ಯ ಕರೆ ನೀಡಿದರು.

ತಾಲೂಕಿನ ಕಾಸರಕೋಡ ಜೈನಜಟಗೇಶ್ವರ ಯುವ ಸಮಿತಿ ಭಾನುವಾರ ಆಯೋಜಿಸಿದ್ದ ಟೊಂಕ ಉತ್ಸವ ಮತ್ತು ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಿಕ್ಕರೆ ಶಿಕಾರಿ, ಸಿಗದಿದ್ದರೆ ಬಿಕಾರಿ ಎನ್ನುವುದು ಮೀನುಗಾರಿಕೆ ವೃತ್ತಿಯಲ್ಲಿನ ಗಳಿಕೆಯ ಬಗ್ಗೆ ಮೀನುಗಾರರಲ್ಲಿ ಮೊದಲಿನಿಂದಲೂ ಆತಂಕ ಇದೆ. ಅದು ಈಗ ಇನ್ನಷ್ಟು ಹೆಚ್ಚಾಗಿದೆ. ಮೀನಿನ ಬರ ಇದನ್ನು ಸಾರಿ ಸಾರಿ ಹೇಳುತ್ತಿದೆ. ಆದ್ದರಿಂದ ಕಡಲ ಮೀನುಗಾರಿಕೆ ಅವಲಂಬಿಸಿರುವ ಎಲ್ಲರೂ ಮುಂದಿನ ತಮ್ಮ ಪೀಳಿಗೆಯ ಭವಿಷ್ಯದ ಬಗ್ಗೆ ಬದಲೀ ಮಾರ್ಗದ ಬಗ್ಗೆ ಚಿಂತಿಸಬೇಕು. ಜೀವನೋಪಾಯಕ್ಕೆ ಕಡಲ ಮೀನುಗಾರಿಕೆಯೊಂದನ್ನೇ ಅವಲಂಬಿಸದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈಗಿನಿಂದಲೇ ಸಮಾಜದಿಂದ ಆಗಬೇಕು ಎಂದರು.ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ, ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಮಾನತೆ ಹೇಗೆ ಮುಖ್ಯವೋ ಹಾಗೆಯೇ ಶೋಷಣೆಗೆ ಒಳಗಾಗುವವರ ಹಿತರಕ್ಷಣೆ ಕೂಡ ನಾಗರಿಕ ಸಮಾಜದ ಕರ್ತವ್ಯವಾಗಿದೆ. ರಾಷ್ಟ್ರೀಯ ಮೀನುಗಾರರ ಸಂಘಟನೆಯ ಪ್ರತಿನಿಧಿಯಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಬಗ್ಗೆ ನನಗೆ ತೃಪ್ತಿ ಇದೆ. ಮುಂದೆಯೂ ಸಹ ಮೀನುಗಾರರ ಹಿತರಕ್ಷಣೆಗೆ ನನ್ನ ಮೊದಲ ಆದ್ಯತೆ ಇರಲಿದೆ ಎಂದು ಹೇಳಿದರು.

ಕಡಲತೀರಗಳ ಸ್ವಚ್ಛ ಪರಿಸರ ಹಾಗೂ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಬೇಕಿದೆ. ಸಚಿವ ಮಂಕಾಳು ವೈದ್ಯರು ಸಂಕಷ್ಟದಲ್ಲಿರುವ ಈ ಭಾಗದ ಮೀನುಗಾರರ ಹಿತರಕ್ಷಣೆ ಮಾಡುವರೆಂಬ ಆಶಯ ವ್ಯಕ್ತಪಡಿಸಿರುವ ಅವರು, ಎಂದಿನಂತೆ ಸಮಾಜಮುಖಿ ಕಾರ್ಯ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಶಿಕ್ಷಕ ಧರ್ಮ ವಿ. ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಇದು ಅಡಿಪಾಯವಿದ್ದಂತೆ ಎಂದರು.

ಹೊನ್ನಾವರ ಫೌಂಡೇಶನ್‌ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, ಮೀನಿನ ಸಾಕಣೆ ಮತ್ತು ಉತ್ಪಾದನೆಯಲ್ಲಿ ಹೊಸ ಆವಿಷ್ಕಾರಗಳುಬಂದಿವೆ. ಸರ್ಕಾರ ಈ ದಿಸೆಯಲ್ಲಿ ಮೀನುಗಾರರಿಗೆ ಪ್ರೋತ್ಸಾಹ ನೀಡಿದರೆ ಮೀನಿನ ಉತ್ಪಾದನೆಯ ಹೆಚ್ಚಳದೊಂದಿಗೆ ಈ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಚಿವರ ಗಮನ ಸೆಳೆದರು.

ಅಧ್ಯಕ್ಷತೆ ವಹಿಸಿದ್ದ ಸೇಫ್ ಸ್ಟಾರ್ ಸಂಸ್ಥೆ ಅಧ್ಯಕ್ಷ ಜಿ.ಜಿ. ಶಂಕರ ಮಾತನಾಡಿ, ಕಾಸರಕೋಡ ಟೊಂಕದ ಕಡಲತೀರದ ನಿವಾಸಿಗಳ ಮೇಲೆ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯ ತೂಗುಗತ್ತಿ ನೇತಾಡುತ್ತಿದೆ. ಇಲ್ಲಿನ ಮೀನುಗಾರರು 10 ವರ್ಷದಿಂದ ನೆಮ್ಮದಿ ಕಳೆದುಕೊಂಡು ಭಯದಲ್ಲೇ ಬದುಕುತ್ತಿದ್ದಾರೆ ಎಂದರು.

ಈ ವರೆಗೆ ಆಳಿಹೋದ ಜನಪ್ರತಿನಿಧಿಗಳ ಪರಿಸರ ಮತ್ತು ಜನವಿರೋಧಿ ಪಾತ್ರದ ಬಗ್ಗೆ ಪ್ರಸ್ತಾಪಿಸಿ ಈ ವರೆಗಿನ ಸರ್ಕಾರಗಳ ನಡೆಯನ್ನು ಪರೋಕ್ಷವಾಗಿ ಟೀಕಿಸಿದರು. ಮೀನುಗಾರರ ಸಮುದಾಯದ ಮಂಕಾಳು ವೈದ್ಯರೇ ನೀವೇ ಸಚಿವರಾಗಿದ್ದು ಇಲ್ಲಿಯ ಮೀನುಗಾರರ ಈ ಪ್ರಮುಖ ಸಮಸ್ಯೆ ಬಗೆಹರಿಸುವರೆಂಬ ಆಶಯವಿದೆ ಎಂದು ಹೇಳಿದರು.

ಮಾಜಿ ತಾಪಂ ಸದಸ್ಯ ಗಣಪಯ್ಯ ಕನ್ಯಾ ಗೌಡ, ಗ್ರಾಪಂ ಸದಸ್ಯ ಜಗದೀಶ ತಾಂಡೇಲ್, ಯುವಕ ಸಮಿತಿ ಗೌರವಾಧ್ಯಕ್ಷ ರಮೇಶ ತಾಂಡೇಲ್, ಉಪಾಧ್ಯಕ್ಷ ಮಹೇಶ ತಾಂಡೇಲ್, ಕಾರ್ಯದರ್ಶಿ ಪಿತಾಂಬರ ತಾಂಡೇಲ್, ಗಿರೀಶ ತಾಂಡೇಲ್, ಡಾ. ಪ್ರಕಾಶ ಮೇಸ್ತ, ವಾಡೆಯ ಅಧ್ಯಕ್ಷ ರಾಜೇಶ್ ತಾಂಡೇಲ್, ಜೈನಜಟಗೇಶ್ವರ ಯುವಕ ಸಮಿತಿ ಅಧ್ಯಕ್ಷ ಭಾಸ್ಕರ ತಾಂಡೇಲ್, ರಮೇಶ ಎಂ. ತಾಂಡೇಲ್, ಗಾಯಕ ಮಹೇಶ ಆಚಾರ್ಯ ಇದ್ದರು.

ಇದಕ್ಕೂ ಮುನ್ನ ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಕೊಚರೇಕರ ಮತ್ತು ಧರ್ಮ ವಿಷ್ಣು ನಾಯ್ಕ ಅವರ ಶೈಕ್ಷಣಿಕ ಕ್ಷೇತ್ರದಲ್ಲಿನ ಕಾರ್ಯ ಗುರುತಿಸಿ ಗೌರವಿಸಲಾಯಿತು.