ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ

| Published : Nov 20 2025, 04:00 AM IST

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಬಾಲ್ಯದಲ್ಲಿರುವಾಗಲೇ ಅವರಿಗೆ ಶಿಕ್ಷಣದ ಜೊತೆಗೆ ಬುದ್ಧಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಇದು ಮುಂದೆ ಅವರ ಜೀವನ ಸುಂದರಗೊಳಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಮಕ್ಕಳ ಸಾಹಿತಿಗಳು ಹಾಗೂ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮಕ್ಕಳು ಬಾಲ್ಯದಲ್ಲಿರುವಾಗಲೇ ಅವರಿಗೆ ಶಿಕ್ಷಣದ ಜೊತೆಗೆ ಬುದ್ಧಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಇದು ಮುಂದೆ ಅವರ ಜೀವನ ಸುಂದರಗೊಳಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಮಕ್ಕಳ ಸಾಹಿತಿಗಳು ಹಾಗೂ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಹೇಳಿದರು.ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಾಲಾ ಆವರಣದಲ್ಲಿ ಗಾಂಧಿ ನಡೆದ ಮಕ್ಕಳ ದಿನಾಚರಣೆ, ಮಕ್ಕಳ ಕವನ ಸಂಕಲನ ಬಿಡುಗಡೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲಿ ಒಂದು ಪ್ರತಿಭೆ ಅಡಗಿದ್ದು, ಅದನ್ನು ಪಾಲಕ-ಪೋಷಕ ವರ್ಗ, ಶಿಕ್ಷಕರು ಗುರ್ತಿಸಿ ಪ್ರೋತ್ಸಾಹ ನೀಡಿದರೇ ಮುಂದೆ ಅವರು ಉನ್ನತವಾದ ಸಾಧನೆ ಮಾಡಿ ದೇಶದ ಅಮೂಲ್ಯ ಸಂಪತ್ತಾಗಲು ಸಾಧ್ಯವಾಗುತ್ತದೆ ಎಂದರು.ಮಕ್ಕಳ ಹಕ್ಕುಗಳು, ಮಕ್ಕಳಿಗೆ ಸೂಕ್ತ ಆರೈಕೆ ಮಾಡುವುದು ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಜಾಗೃತಿ ಮೂಡಿಸುವುದು ಮಕ್ಕಳ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ. ಪ್ರಸುತ್ತ ದಿನಗಳಲ್ಲಿ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ, ಮಕ್ಕಳನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳಿಗೆ ಸೋಮಾರಿ ಗುಣಗಳನ್ನು ಕಲಿಸದೇ ಪ್ರಯತ್ನಶೀಲ ಗುಣಗಳನ್ನು ಬೆಳೆಸಬೇಕು. ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸಾಧನೆಗೆ ಪ್ರಚೋದಿಸಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್.ಹೈಯಾಳಕರ, ಸಿಂದಗಿ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಅವರು ಮಕ್ಕಳ ಹಾಗೂ ಶಾಲೆಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಶಾಲೆಯ ಅಧ್ಯಕ್ಷ ವಿ.ಕೆ.ಪಾಟೀಲ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು.ಕರ್ನಾಟಕ ರಾಜ್ಯ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಹ.ಮ.ಪೂಜಾರಿ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಕನ್ನಡಪ್ರಭದ ಹಿರಿಯ ವರದಿಗಾರ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರಿಗೆ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳು ರಚಿಸಿದ ಕವನ ಸಂಕಲನ ಬಿಡುಗಡೆ, ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಶಸ್ತಿ ಪಡೆದ ಚಕ್ರ ಎಸೆತದಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಪೈಜಾನ್ ಹಿಪ್ಪರಗಿ ರಾಜ್ಯಕ್ಕೆ ಪ್ರಥಮ ಹಾಗೂ ಕಾಲೇಜಿನ ವಿದ್ಯಾರ್ಥಿ ಅವಿನಾಶ ತಳಕೇರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳೇ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.ಇದೇ ಸಂದರ್ಭದಲ್ಲಿ ಕಸಾಪ ನಿಕಟ ಪೂರ್ವ ಅಧ್ಯಕ್ಷ ಜಿ.ಪಿ.ಬಿರಾದಾರ, ಶಾಲೆಯ ಮುಖ್ಯೋಪಾಧ್ಯಯ ಮಾಂತೇಶ ಬೀಳಗಿ, ಶ್ರೀಕಾಂತ ತೋಳನೂರ, ಶಿಕ್ಷಕರುಗಳಾದ ಕಾಶಿನಾಥ ಯಂಭತ್ನಾಳ, ಕುಮಾರ ರಾಠೋಡ, ರಾಜು ಕಾಖಂಡಕಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.