ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವಲ್ಲಿ ವಿದ್ಯಾವಂತರೇ ಹೆಚ್ಚು

| Published : Jan 05 2025, 01:30 AM IST

ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವಲ್ಲಿ ವಿದ್ಯಾವಂತರೇ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವದಲ್ಲಿ 10ನೇ ತರಗತಿಯಲ್ಲಿನ ಸಾಧಕ ಮಕ್ಕಳನ್ನು ಗೌರವಿಸಲಾಯಿತು. ಮಾಜಿ ಶಾಸಕ ಎಸ್.ಬಾಲರಾಜು, ಪ್ರೇಮಲತಾ ಕೃಷ್ಣಸ್ವಾಮಿ, ರೇಖಾ ರಮೇಶ್, ಡಾ.ದತ್ತೇಶ್ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಪ್ರತಿಭೆ ಅನಾವರಣಕ್ಕೆ ಮಾನಸ ವೇದಿಕೆ ಸೂಕ್ತವಾಗಿದ್ದು ಕಲಿತ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು. ಆ ಮೂಲಕ ತಂದೆ ತಾಯಿಯನ್ನು ಗೌರವಿಸುವ ಜೊತೆಗೆ ಕೊನೆಗಾಲದಲ್ಲಿ ಅವರನ್ನು ವೃದ್ಧಾಶ್ರಮದಂತಹ ಕೂಪಕ್ಕೆ ತಳ್ಳದಂತೆ ಜಾಗ್ರತೆ ವಹಿಸಬೇಕು, ವಿದ್ಯೆ ಕಲಿತ ಮೇಲೆ ಹಿಂದಿನ ಹಾದಿಯನ್ನು ಎಂದಿಗೂ ಮರೆಯಕೂಡದು ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.ಪಟ್ಟಣದ ಮಾನಸ ಅಂಗಸಂಸ್ಥೆಯ ನಿಸರ್ಗ ವಿದ್ಯಾನಿಕೇತನ ಶಾಲಾ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ಕಲಿತ ವಿದ್ಯಾರ್ಥಿಗಳು ನಿಮ್ಮ ಕಲಿಕೆ ಮತ್ತು ಬೆಳವಣಿಗೆಗೆ ಸ್ಪಂದಿಸಿದ ತಂದೆ ತಾಯಿಯನ್ನು ಗೌರವಿಸಿ, ಅವರನ್ನು ಸ್ಮರಿಸಿ. ಅನೇಕರು ತಮ್ಮ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕ ಸೇರಿಸುವ ಸ್ಥಿತಿ ತಲುಪಿದ್ದಾರೆ. ಅಂತಹ ವಿದ್ಯಾವಂತರು, ಬುದ್ಧಿವಂತರು, ಇಂದಿನ ಪ್ರಪಂಚದಲ್ಲಿದ್ದಾರೆ, ವಿದ್ಯಾರ್ಥಿಗಳು ಎಂದಿಗೂ ನಡೆದು ಬಂದ ಹೆಜ್ಜೆ ಗುರುತು ಮರೆಯಬಾರದು ಎಂದು ಸಲಹೆ ನೀಡಿದರು.

ಕೊಳ್ಳೇಗಾಲ ಎಂದರೆ ಹಿಂದೆ ಭಯದ ವಾತಾವರಣವಿತ್ತು, ಆದರೆ ಅದರ ಹಿಂದೆ ಇತಿಹಾಸವಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು, ಮಾನಸ ಶಿಕ್ಷಣ ಸಂಸ್ಥೆ ಶಿಸ್ತು ಬದ್ಧ ಸಂಸ್ಥೆ. ಇದೊಂದು ಜಿಲ್ಲೆಯಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು ಈ ಸಂಸ್ಥೆ ಬಗ್ಗೆ ನನಗೆ ಅತೀವ ಅಭಿಮಾನವಿದೆ. ಕಷ್ಟದಲ್ಲೂ ಸಂಸ್ಥೆ ಕಟ್ಟಿದ ಡಾ.ದತ್ತೇಶ್ ಮತ್ತಿತರರ ನೋವು ನನಗೆ ತಿಳಿದಿದೆ. ಇಂದು ಸಂಸ್ಥೆ ಬೃಹದಾಕಾರಕ್ಕೆ ಬೆಳೆದಿದ್ದು ಇನ್ನಷ್ಟು ಸಾಧನೆಗೈಯುವಂತಾಗಲಿ ಎಂದರು.

ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪೈಪೋಟಿ ಯುಗದಲ್ಲಿ ಹೆಚ್ಚು ಸಾಧನೆ ಮಾಡುವಂತಾಗಬೇಕು. ವಿದ್ಯಾರ್ಥಿಗಳ ಬೆಳವಣಿಗೆ ಕಂಡು ಅಸೂಯೆ ಪಡದವರು ತಂದೆ, ತಾಯಿ ಮತ್ತು ಶಿಕ್ಷಕರು ಮಾತ್ರ, ಈ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುವ ಕೆಲಸ ನಿರಂತರವಾಗಿರಲಿ, ನನ್ನ ಸಮಾಜ ಸೇವೆಗೆ ಪ್ರೇರಣೆ ಪತಿ ಎಚ್.ಕೃಷ್ಣಸ್ವಾಮಿ ಅವರು. ಅವರ ಮಾರ್ಗದರ್ಶನ , ನನ್ನ ಮಗ ಮಹಾನಂದ ಮತ್ತು ಗೆಳೆಯರು, ಕೊಳ್ಳೇಗಾಲದ ಜನರ ಸಹಕಾರದಿಂದ ನನ್ನ ಸಮಾಜ ಸೇವೆ ನಿರಂತವಾಗಿ ಸಾಗಲಿದೆ ಎಂದರು.

ಈ ವೇಳೆ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ 1ನೇ ತರಗತಿಯಿಂದ 9ನೇ ತರಗತಿ ತನಕ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯೆ ಸುಮ ಸುಬ್ಬಣ್ಣ, ಡಾ.ದತ್ತೇಶ್ ಕುಮಾರ್, ನಾಗರಾಜು, ರೂಪದತ್ತೇಶ್, ಮುಖ್ಯಶಿಕ್ಷಕ ಶಂಕರ್, ಶಿಕ್ಷಕರಾದ ಗಿರಿಜಾ, ಪ್ರಿಯಾ, ಅನಿತಾ, ರಮ್ಯ ಇನ್ನಿತರರಿದ್ದರು.