ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚೆಗೆ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ವೃದ್ಧರ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ವಿಷಾದಿಸಿದರು.ನಗರದ ಗಾಂಧಿ ಭವನದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಲವು ದಶಕಗಳ ಹಿಂದೆ ಅವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗಿತ್ತು. ಮನೆ ಅಂಗಳ ಸಂತೋಷದಿಂದ ತುಂಬಿತ್ತು, ಅಪ್ಪ-ಅಮ್ಮ, ಅಜ್ಜ-ಅಜ್ಜಿ, ತಾತ-ಮುತ್ತಾತ ಎಂಬ ಸಂಬಂಧ ಭಾವನೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು ಪ್ರೀತಿ, ಸಂತೋಷ, ವಿಶ್ವಾಸ ಎನ್ನುವುದು ಪ್ರತಿಯೊಬ್ಬರ ಮನೆಯಲ್ಲೂ ತುಂಬಿ ತುಳುಕುತ್ತಿತ್ತು. ಆದರೆ, ಕಾಲಕ್ರಮೇಣ ವಿಭಕ್ತ ಕುಟುಂಬಗಳು ಹೆಚ್ಚಾಗಿ ಅವಿಭಕ್ತ ಕುಟುಂಬದ ಗಂಧಗಾಳಿ, ಪ್ರೀತಿ, ಮಮತೆ ಮಮಕಾರ ಎನ್ನುವುದನ್ನೇ ಈಗಿನ ಯುವಜನತೆ ಮರೆತಿದ್ದಾರೆ ಎಂದರು.
ಎಷ್ಟೋ ಹಿರಿಯರು ಆರ್ಥಿಕವಾಗಿ ಸದೃಢರಾಗಿರುತ್ತಾರೆ ಆದರೆ, ಪ್ರೀತಿ ಮಮಕಾರವಿಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇನ್ನೂ ಕೆಲವರು ಆರ್ಥಿಕ ಹಾಗೂ ಮಾನಸಿಕವಾಗಿಯೂ ಸದೃಢರಾಗಿರುವುದಿಲ್ಲ. ಇದಕ್ಕೆ ಮೂಲ ಕಾರಣ ಅವರನ್ನು ಮಕ್ಕಳು ಸರಿಯಾಗಿ ಪೋಷಣೆ ಮಾಡದಿರುವುದೇ ಕಾರಣ ಎಂದರು.ಕಾನೂನಾತ್ಮಕವಾಗಿ ಸಾಕಷ್ಟು ನಿಯಮಗಳು ಹಿರಿಯರಿಗೋಸ್ಕರ ಜಾರಿಗೆ ಬಂದಿವೆ. ಆದರೆ, ಪ್ರತಿಯೊಬ್ಬರೂ ಕಾನೂನಾತ್ಮಕವಾಗಿ ನ್ಯಾಯ ತೆಗೆದುಕೊಳ್ಳುವುದಕ್ಕೆ ಹೋದರೆ ಮಾನವೀಯತೆ ಹಾಗೂ ಪ್ರೀತಿ-ವಿಶ್ವಾಸಕ್ಕೆ ಬೆಲೆ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ವಯಸ್ಸಾಗಿರುವ ವೃದ್ಧರಿಗೆ ವೇದಿಕೆ ಮೇಲೆ ಗೌರವಯುತವಾಗಿ ಸನ್ಮಾನ ಮಾಡಲಾಯಿತು. ಮತ್ತು ಕಿವಿ ಕೇಳದವರಿಗೆ ಉಚಿತವಾಗಿ ಶ್ರವಣ ಸಾಧನ ನೀಡಲಾಯಿತು.೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ, ಜಿಲ್ಲಾ ಕ್ರೀಡಾಧೀಕಾರಿ ಓಂ ಪ್ರಕಾಶ್ ಇತರರಿದ್ದರು.