ಶಿಕ್ಷಣರಂಗದ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅದಾಲ್‌

| Published : Dec 12 2024, 12:33 AM IST

ಸಾರಾಂಶ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಸ್ವಾಭಿಮಾನಿ ಬಳಗವು ಶಿಕ್ಷಣ ರಂಗದಲ್ಲಿನ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಡಿ.18 ರಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿ ಶಿಕ್ಷಣ ಅದಾಲತ್, ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆಗೆ ಎಂಬ ವಿಶಿಷ್ಟ ಅಭಿಯಾನ ಆಯೋಜಿಸಿದ್ದು, ಹತ್ತು ಶಾಲೆಗಳಿಗೆ ಭೇಟಿ ನೀಡುವ ಮೂಲಕ ಮೂಲಭೂತ ಸೌಲಭ್ಯ ಸೇರಿ ವಸ್ತುಸ್ಥಿತಿ ಅಧ್ಯಯನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸ್ವಾಭಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳಗದ ವತಿಯಿಂದ ಶಿಕ್ಷಣ ಅದಾಲತ್ ನಡೆಸಲಾಗುತ್ತಿದ್ದು, ಸೂರಗೊಂಡನಕೊಪ್ಪ, ಜೋಗ, ಚಿನ್ನಿಕಟ್ಟೆ, ಮಾದಾಪುರ, ಸವಳಂಗ, ಸೋಗಿಲು, ಚಟ್ನಳ್ಳಿ ಸೇರಿ ಹತ್ತು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ಮುಖಂಡರ ಜೊತೆ ಸಂವಾದ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲೆಡೆ ಅಸಮಾನತೆ ಹೆಚ್ಚಾಗಲು ಕಾರಣ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆ. ಇದು ತೊಲಗಿಸಬೇಕೆಂಬ ನಿಟ್ಟಿನಲ್ಲಿ ಬಳಗವು ಇಂಥಹ ವಿನೂತನ ಅಭಿಯಾನ ಹಮ್ಮಿಕೊಂಡಿದೆ. ಇದು ಕೇವಲ ಹೊನ್ನಾಳಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಹರಿಹರ, ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಎಲ್ಲೆಡೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಡಿ.22 ರಂದು ಬೀದರ್, 23ಕ್ಕೆ ಯಾದಗಿರಿಯಲ್ಲಿ ಶಿಕ್ಷಣ ಅದಾಲತ್ ನಡೆಯಲಿದೆ. ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿಲ್ಲ. ಹೊನ್ನಾಳಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಬಹುದು. ಆದರೆ ಯಾದಗಿರಿಯಂಥಹ ಪ್ರದೇಶಗಳಲ್ಲಿ ಸ್ವಾಭಿಮಾನಿ ಬಳಗದ ಶಿಕ್ಷಣ ಅದಾಲತ್ ಅವಶ್ಯಕತೆ ಇದೆ. ನೂರಾರು ಜನರು ಸ್ವಾಗತಿಸುತ್ತಿದ್ದಾರೆ. ಹಾಗಾಗಿ, ತಿಂಗಳಿಗೆ ಮೂರು ಕಡೆಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ತಿಳಿಸಿದರು.

ಸ್ವಾಭಿಮಾನಿ ಬಳಗವು ಕರ್ನಾಟಕದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವುದು ಖಚಿತ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಕಾಡುತ್ತಿದೆ. ಬೆಂಗಳೂರು, ದಾವಣಗೆರೆಯ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಸಾಮರ್ಥ್ಯವು ಹಳ್ಳಿಯ ವಿದ್ಯಾರ್ಥಿಗಳಿಗೆ ತಲುಪಿಸಬೇಕೆಂಬ ಕನಸಿದೆ. ಶಾಸಕರು, ಸಂಸದರು ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಕೆಲ ಶಾಲೆಗಳಲ್ಲಿ ಒಬ್ಬರು, ಇಬ್ಬರು, ವಿದ್ಯಾರ್ಥಿಗಳಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕಟಿಬದ್ಧರಾಗಬೇಕು ಎಂದು ಹೇಳಿದರು.

ಶಾಸಕರು, ಸಂಸದರು ಸ್ವಂತ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ವಿನಃ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ಬೇಸರದ ಸಂಗತಿ. ಜನಪ್ರತಿನಿಧಿಗಳಲ್ಲದಿದ್ದರೂ ಈ ರೀತಿ ಕೆಲಸ ಮಾಡಬಹುದು ಎಂದು ಸಾಧಿಸಿ ತೋರಿಸುವ ನಿಟ್ಟಿನಲ್ಲಿ ಶ್ರಮಿಸಲಿರುವ ಸ್ವಾಭಿಮಾನಿ ಬಳಗವು ಹೊಸ ನಾಯಕರ ಸೃಷ್ಟಿಯತ್ತವೂ ಗಮನ ಹರಿಸಲಿದೆ.

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕೃಷಿ ಅದಾಲತ್, ಜನರ ಸಮಸ್ಯೆ ಪರಿಹರಿಸಲು ಜನತಾ ಅದಾಲತ್ ನಡೆಸಲಾಗುವುದು. ಈ ಮೂಲಕ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಬಳಗ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತಗಳು ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಬಂದಿವೆ. ಇಲ್ಲಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂಬ ಒತ್ತಡ ಇದೆ. ಅದೇ ರೀತಿಯಲ್ಲಿ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಹರಪನಹಳ್ಳಿಯಲ್ಲಿಯೂ ಇದೇ ರೀತಿಯ ಒತ್ತಾಯ ಇದ್ದು, ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸರ್ವೇ ಆಧರಿಸಿ ಜನರ ಒತ್ತಡ ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ವಿನಯಕುಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾಳಿ ಘಟಕದ ವಿನಯ್ ವಗ್ಗಪ್, ರಾಜು ಕಡಗಣ್ಣಾರ್, ನವೀನ್ ಶೆಟ್ಟಿ, ಎಂ.ವಾಸಪ್ಪ, ಮಂಜುನಾಥ ದೇವರಾಜ್ ಮತ್ತಿತರರು ಹಾಜರಿದ್ದರು.