ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಬದುಕಿನ ಎರಡು ಬೇರುಗಳಿದ್ದಂತೆ. ಶಿಕ್ಷಣದ ಜೊತೆಗೆ ಸಂಸ್ಕಾರ ಸಾಗಿದರೆ ಮಾತ್ರ ಅದು ನಿಜವಾದ ಮತ್ತು ಅರ್ಥಪೂರ್ಣ ಶಿಕ್ಷಣವಾಗುತ್ತದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶಿವಶಕ್ತಿ ಸಮುದಾಯಭವನದಲ್ಲಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ 11ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಸೋಮವಾರ ನಡೆದ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕೇವಲ ವಿದ್ಯಾರ್ಥಿಗಳ ಸರ್ಟಿಫಿಕೇಟ್ ಆಗಿ ಉಳಿಯಬಾರದು. ಶಿಕ್ಷಣ ಎಂದರೆ ಬಡವರ ನಿರ್ಗತಿಕರ ಕಣ್ಣೀರು ಒರೆಸುವ ರಕ್ಷಾ ಕವಚವಾಗಬೇಕು. ವಿದ್ಯಾರ್ಥಿಗಳ ಉತ್ತಮ ನಡವಳಿಕೆಯೇ ನಿಜವಾದ ಶಿಕ್ಷಣವಾಗುತ್ತದೆ ಎಂದರು.ಶಿಕ್ಷಣ ವಿದ್ಯಾರ್ಥಿಗಳಿಗೆ ಬದುಕು ಕಲಿಸುವ ಜೊತೆಗೆ ಆತ್ಮವಿಶ್ವಾಸ ತುಂಬುತ್ತದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಹುಟ್ಟು ಹಾಕುತ್ತದೆ. ಸಾಮಾನ್ಯ ಮನುಷ್ಯವನ್ನು ಅಸಾಮಾನ್ಯರನ್ನಾಗಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದರು.
ಹಲವು ಸಂಶೋಧಕರು, ವಿಜ್ಞಾನಿಗಳು ಮತ್ತು ದೊಡ್ಡ ಮಟ್ಟದಲ್ಲಿ ಆವಿಷ್ಕಾರ ಮಾಡಿದವರೆಲ್ಲರೂ ಸಾಮಾನ್ಯ ಕುಟುಂಬದಿಂದಲೇ ಬಂದಿದ್ದಾರೆ. ಸಮಾಜದಲ್ಲಿ ಅಸಮಾನ್ಯ ಸಾಧನೆ ಮಾಡಿದವರೆಲ್ಲರೂ ಮಧ್ಯಮ ವರ್ಗ ಕುಟುಂಬದಿಂದಲೇ ಬಂದವರಾಗಿದ್ದಾರೆ ಎಂದರು.ಶಿಕ್ಷಣ ಮತ್ತು ಸಂಸ್ಕಾರ ಒಟ್ಟಿಗೆ ಸಾಗಿದರೆ ಮಾತ್ರ ವಿದ್ಯಾರ್ಥಿಗಳ ಬದುಕು ಮುಗಿಲೆತ್ತರಕ್ಕೆ ಹೋಗುತ್ತದೆ. ಮನಸ್ಸಿಟ್ಟು ಕಲಿತ ಅಕ್ಷರ ಬೆವರು ಸುರಿಸಿ ದುಡಿದ ಹಣ ಭಕ್ತಿಯಿಂದ ಮಾಡಿದ ಪೂಜೆ ಎಂದಿಗೂ ವ್ಯರ್ಥವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಎಂದಿಗೂ ಕುಗ್ಗಬಾರದು. ಅದರಲ್ಲಿಯೂ ಮುಖ್ಯವಾಗಿ ಕೀಳರಿಮೆ ಇರಬಾರದು ಎಂದರು.
ಏಕಚಿತ್ತದಿಂದ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಮುನ್ನುಗ್ಗಿದರೆ ಯಶಸ್ಸು ನಿಮ್ಮ ಜೊತೆಯಾಗಿ ನಿಲ್ಲುತ್ತದೆ. ಪ್ರಪಂಚದಲ್ಲಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲ್ಪಂಕ್ತಿಯಲ್ಲಿರುವ ಅದೆಷ್ಟೋ ಮಂದಿ ಸಾಧಕರು ಕೆಲವು ಸೋಲನ್ನು ಸ್ವೀಕರಿಸಿ ಸವಾಲುಗಳನ್ನು ಎದುರಿಸಿದ್ದಾರೆ ಎಂದರು.ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಸಾಧನೆ ಎಂಬುದು ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಒಂದು ಗುರಿ ಕನಸಿನೊಂದಿಗೆ ದೃಢ ಸಂಕಲ್ಪ ಮಾಡಿದರೆ ಗೆಲುವಿನ ಹಾದಿ ಸುಗಮವಾಗುತ್ತದೆ ಎಂದರು.
ಇಷ್ಟಪಟ್ಟು ಓದಿ ಪ್ರಪಂಚ ಜ್ಞಾನವನ್ನು ಅರಿತುಕೊಂಡರೆ ಈ ಪ್ರಪಂಚವನ್ನೇ ಆಳುವ ಅಧಿಕಾರವೇ ನಿಮಗೆ ಸಿಗಬಹುದು. ಸಮಾಜವನ್ನು ತಿದ್ದುವ ಅವಕಾಶ ಸಿಗಬಹುದು. ಬಡವರ ನಿರ್ಗತಿಕರ ಕಣ್ಣೀರು ಒರೆಸುವ ಕೈ ನಿಮ್ಮದಾಗಬಹುದು. ಹಾಗಾಗಿ ಶಿಕ್ಷಣ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಇದ್ದೇ ಇರುತ್ತದೆ. ಇದಕ್ಕೆ ನಿರಂತರ ಕಲಿಕೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ಕಂಪ್ಯೂಟರ್‌ಗೆ ದಾಸರಾಗಿದ್ದಾರೆ. ಕಂಪ್ಯೂಟರ್ ಜ್ಞಾನ ಬೇಕು ನಿಜ. ಆದರೆ, ಜ್ಞಾನ ಮತ್ತು ಅಜ್ಞಾನಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಜ್ಞಾನಿಗಳ ಸಂಖ್ಯೆ ಹೆಚ್ಚಾಗಬೇಕು. ಜ್ಞಾನದ ಜೊತೆ ಅಜ್ಞಾನವನ್ನು ಬೆಳೆಸಿಕೊಂಡರೆ ಮನಸ್ಸು ಹುಚ್ಚು ಕುದುರೆಯಾಗುತ್ತದೆ ಎಂದು ಎಚ್ಚರಿಸಿದರು.
ಯಾವುದನ್ನು ಆಯ್ಕೆ ಮಾಡಬೇಕು ಎಂಬುದು ನಿಮ್ಮಲ್ಲಿರುತ್ತದೆ. ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ಹಾನಿಕರವಾದದನ್ನು ಅಲ್ಲಿಯೇ ಬಿಡಬೇಕು. ಮೊಬೈಲ್ ಎಂಬ ಮಹಾಮಾರಿಯಿಂದ ದುರಭ್ಯಾಸ ಬೆಳೆಸಿಕೊಳ್ಳುತ್ತಿರುವ ಯುವ ಸಮುದಾಯ ಆನ್‌ಲೈನ್ ಗೇಮ್ಸ್‌ನತ್ತ ಮುಖಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬೊಬೈಲ್‌ನಿಂದ ದೂರ ಉಳಿದು ಪುಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಪಠ್ಯ ಪುಸ್ತಕದ ಜೊತೆಗೆ ಕೌಶಲ್ಯಾಭಿವೃದ್ಧಿ ತರಗತಿಗಳಲ್ಲಿ ಭಾಗವಹಿಸಬೇಕು. ಕಥೆ ಕಾದಂಬರಿ ಮತ್ತು ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಬದುಕಿನ ಭರವಸೆ ಮೂಡುತ್ತದೆ ಎಂದರು.
ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಗಮವು ತ್ರಿವೇಣಿ ಸಂಗಮವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯಬೇಕೆನ್ನುವ ನಿರ್ಮಲಾನಂದನಾಥಶ್ರೀಗಳ ಸಂಕಲ್ಪ ಮತ್ತು ಪರಿಕಲ್ಪನೆ ನಿಜಕ್ಕೂ ಅನನ್ಯ ಹಾಗೂ ಅರ್ಥಪೂರ್ಣವಾಗಿದೆ ಎಂದರು.ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತುಪ್ರದರ್ಶನದ ಮೂಲಕ ಯುವಪೀಳಿಗೆಯನ್ನು ಪ್ರೋತ್ಸಾಹಿಸಿ ಅವರ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಮೂಲಕ ಯುವ ಸಮುದಾಯವನ್ನು ಭವಿಷ್ಯದ ವಿಜ್ಞಾನಿಗಳು ಹಾಗೂ ಮನುಷ್ಯತ್ವವುಳ್ಳರನ್ನಾಗಿಸಬೇಕೆಂಬ ಚಿಂತನೆ ಈ ಮೇಳದ ಉದ್ದೇಶವಾಗಿದೆ ಎಂದರು.
ಆದಿಚುಂಚನಗಿರಿ ಮಠವು ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಕಾರದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ನೀಡುತ್ತಿದೆ. ಬದುಕಿಗೆ ಬೇಕಾದ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ ಎಂದರು.