ಶಿಕ್ಷಣ, ಉದ್ಯೋಗ ಮೂಲಭೂತ ಹಕ್ಕಾಗಲಿ: ಬಸವರಾಜ ಪೂಜಾರ

| Published : Feb 23 2024, 01:54 AM IST

ಸಾರಾಂಶ

ಸಮಾನತೆಯು ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಾದರೆ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕಿದೆ.

ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ವಿಷಯ ಕುರಿತು ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಹಾವೇರಿ

ಸ್ವಾತಂತ್ರ್ಯ ಹೋರಾಟದ ಪ್ರಮುಖ ಆಶಯ ಸಮಾನತೆಯು ದೇಶದಲ್ಲಿ ಸಮರ್ಪಕವಾಗಿ ಜಾರಿಯಾಗಬೇಕಾದರೆ ಶಿಕ್ಷಣ ಮತ್ತು ಉದ್ಯೋಗ ಮೂಲಭೂತ ಹಕ್ಕಾಗಬೇಕಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.

ನಗರದ ಹೊಯ್ಸಳ ಐಟಿಐ ಕಾಲೇಜಿನಲ್ಲಿ ಬುಧವಾರ ಡಿವೈಎಫ್‌ಐ ೧೨ನೇ ರಾಜ್ಯ ಸಮ್ಮೇಳನದ ಭಾಗವಾಗಿ ಜಿಲ್ಲಾ ಸಮಿತಿಯು ಏರ್ಪಡಿಸಿದ್ದ ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ವಿಷಯ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕ ಕಳೆದರೂ ಸರ್ವರಿಗೂ ಶಿಕ್ಷಣ ದೊರೆಯದಿರುವ ಪರಿಣಾಮವಾಗಿ ಬಡವರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ಈ ಸ್ಥಿತಿಯಿದ್ದು, ಉನ್ನತ ಶಿಕ್ಷಣವನ್ನು ಎಲ್ಲರಿಗೂ ಪಡೆಯಲಾಗುತ್ತಿಲ್ಲ. ಒಂದು ವೇಳೆ ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆದರೂ ಉದ್ಯೋಗದ ಖಾತ್ರಿ ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಆದ್ದರಿಂದಾಗಿ ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ ಯುವಜನತೆ ಧ್ವನಿ ಎತ್ತಬೇಕಿರುವುದು ಅನಿವಾರ್ಯವಾಗಿದೆ ಎಂದರು.

ಡಿವೈಎಫ್‌ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ವೃತ್ತಿಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದರೂ, ಉದ್ಯೋಗ ಖಾತ್ರಿಯಾಗದಿರುವುದು ದುರಂತವಾಗಿದೆ. ಸರ್ಕಾರ ಕೃಷಿ ಪೂರಕವಾದ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಠಿಸಲು ಮುಂದಾಗಬೇಕು ಎಂದರು.

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ-ಯುವಜನ ಸಮುದಾಯ ಅಧ್ಯಯನದ ಜೊತೆಗೆ ದೇಶ ಕಟ್ಟುವ ಜವಾಬ್ದಾರಿ ಹೊರಬೇಕು. ಈ ನೆಲದ ಐಕ್ಯತೆ, ಸೌಹಾರ್ದತೆ ಹಾಗೂ ಸಮಗ್ರತೆಯನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದರು.

ಪ್ರಾಂಶುಪಾಲ ರವಿ ಉಮ್ಮಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ಮುಖಂಡ ರಾಹುಲ ಕಡೆಮನಿ ನಿರ್ವಹಿಸಿದರು. ಬಸವರಾಜ ಗೋವಿಂದಪ್ಪನವರ ವಂದಿಸಿದರು.