ಸಾರಾಂಶ
ಕುಂಟೋಜಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ
ಗಜೇಂದ್ರಗಡ: ಶಿಕ್ಷಣ ಎಂಬುದು ಜಗತ್ತನ್ನು ಬದಲಾವಣೆಯೆಡೆಗೆ ಸಾಗುವ ಸಾಧನವಾಗಿದ್ದು, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮೈಗೂಡಿಸಿಕೊಂಡು ದೇಶದ ಸಂಪತ್ತಾಗಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೀರೇಶ ರಾಜೂರ ಹೇಳಿದರು. ಸಮೀಪದ ಕುಂಟೋಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ''''ಕನ್ನಡಪ್ರಭ'''' ಯುವ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ದೊಡ್ಡ ಪರೀಕ್ಷೆ ಎಂಬ ವಾತಾವರಣ ನಿರ್ಮಿಸಿಕೊಂಡಿರುತ್ತಾರೆ. ಶಿಕ್ಷಕ, ಪಾಲಕ ಹಾಗೂ ವಿದ್ಯಾರ್ಥಿಗಳು ಸಮನ್ವಯ ಸಾಧಿಸಿದರೆ ಉತ್ತಮ ಫಲಿತಾಶದ ಸಾಧನೆ ಸರಳವಾಗಲಿದೆ. ಮಕ್ಕಳಿಗೆ ಉತ್ತಮ ಅಂಕಗಳನ್ನು ಪಡೆಯಬೇಕು ಎಂಬ ಒತ್ತಡವನ್ನು ಹಾಕುವ ಬದಲು ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಸ್ಥಿತಿಗತಿ ಕುರಿತು ಶಿಕ್ಷಕರೊಂದಿಗೆ ಚರ್ಚಿಸುವುದು ಸೂಕ್ತವಾದದ್ದು ಎಂದ ಅವರು, ''''ಕನ್ನಡಪ್ರಭ'''' ಸಾಮಾಜಿಕ ನ್ಯಾಯದ ಪಾಲನೆ ಜತೆಗೆ ವಿದ್ಯಾರ್ಥಿಗಳಲ್ಲಿನ ಜ್ಞಾನದ ಹಸಿವನ್ನು ನೀಗಿಸಲು ಯುವ ಆವೃತ್ತಿ ಸಹಾಯಕ ಎಂಬುದು ಶಾಲಾ ವಿದ್ಯಾರ್ಥಿಗಳು ತಿಳಿಸಿದ ಅನಿಸಿಕೆಗಳಿಂದ ಮನನವಾಗಿದೆ. ಪರೀಕ್ಷಾ ತಯಾರಿಯಲ್ಲಿ ಆರೋಗ್ಯ ಮುಖ್ಯ ಪಾತ್ರ ವಹಿಸುವುದರಿಂದ ನಿದ್ದೆಗೆಟ್ಟು ಓದುವುದು ಸಮಂಜಸವಲ್ಲ. ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಪರೀಕ್ಷೆಗಳ ತಯಾರಿಗಾಗಿ ಯುವ ಅವೃತ್ತಿಯನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆ ಎದುರಿಸಲು ಅಗತ್ಯ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಶಿಕ್ಷಕರು ಮುಂದಾಗಬೇಕು ಎಂದರು.
ಶಿಕ್ಷಕ ಅಶೋಕ ಕಲ್ಲಿಗನೂರು ಮಾತನಾಡಿ, ಪರೀಕ್ಷೆಗಳು ಬರಲು ಕೆಲವು ತಿಂಗಳು ಬಾಕಿಯಿದ್ದು, ವಿದ್ಯಾರ್ಥಿಗಳು ಕ್ರಮಬದ್ಧ ಅಧ್ಯಯನಕ್ಕೆ ಒತ್ತು ನೀಡಬೇಕು. ಪರೀಕ್ಷೆಗಳು ಎಂದರೆ ನಿಮ್ಮಲ್ಲಿ ಸಂಭ್ರಮವನ್ನು ತರುವಂತಾಗಬೇಕಾದರೆ ಶಿಸ್ತುಬದ್ಧ ವಿದ್ಯಾಭ್ಯಾಸ ಮೈಗೂಡಿಸಿಕೊಳ್ಳಬೇಕು. ಶಿಕ್ಷಣ ಪ್ರೇಮಿಗಳು ಯುವ ಆವೃತ್ತಿ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀಡುತ್ತಿರುವ ಸಹಕಾರ ಅನುಕರಣೀಯ ಎಂದರು.ವಿದ್ಯಾರ್ಥಿನಿಯರಾದ ಬಸಮ್ಮ ಡೊಳ್ಳಿನ, ಸಂಜನಾ ಗೋನಾಳ ಯುವ ಆವೃತ್ತಿ ಬಗ್ಗೆ ಅನಿಸಿಕೆ ತಿಳಿಸಿದರು.
ಕನ್ನಡಪ್ರಭ ವರದಿಗಾರ ಎಸ್.ಎಂ. ಸೈಯದ್ ಮಾತನಾಡಿ, ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿರಲಿ ಎಂಬ ಆಶಯದಿಂದ ಶಿಕ್ಷಣ ಪ್ರೇಮಿಗಳು ನಿಮಗೆ ಯುವ ಆವೃತ್ತಿಯನ್ನು ಉಚಿತವಾಗಿ ನೀಡಿದ್ದು, ಅವರ ನಿಸ್ವಾರ್ಥ ಕಾರ್ಯಕ್ಕೆ ನಿಮ್ಮ ಫಲಿತಾಂಶ ಕಾಣಿಕೆಯಾಗಿರಲಿ ಎಂದರು.ಶಿಕ್ಷಕರಾದ ಪಿ.ಎಸ್. ಹಿರೇಮಠ, ಎಲ್.ಸಿ. ರಾಠೋಡ, ಎ.ಎಸ್. ಹೂಗಾರ, ಜಿ.ಎಸ್. ಪಾಟೀಲ, ಎಂ.ವೈ. ವಸ್ತಾದ ಇದ್ದರು.