ಸಾಕ್ಷರತೆ ಪ್ರಮಾಣ ಕಡಿಮೆ ಇದ್ದ ಪರಿಣಾಮ ದೇಶವನ್ನು ನೂರಾರು ವರ್ಷಗಳ ಕಾಲ ವಿದೇಶಿಯರು ಆಳಿದರು

ಕುರುಗೋಡು: ಇಂದಿನ ಮಕ್ಕಳಿಗೆ ಔಪಚಾರಿಕ ಶಿಕ್ಷಣದ ಜತೆಗೆ ಜೀವನಾನುಭವದ ಶಿಕ್ಷಣ ಕೊಡುವ ಅಗತ್ಯವಿದೆ ಎಂದು ಪಿಡಿಒ ಅನೀಲ್ ಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಪಟ್ಟಣದ ಕೊಟ್ಟೂರುಸ್ವಾಮಿ ಶಾಖಾ ವಿರಕ್ತ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಎಂಟನೇ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಕ್ಷರತೆ ಪ್ರಮಾಣ ಕಡಿಮೆ ಇದ್ದ ಪರಿಣಾಮ ದೇಶವನ್ನು ನೂರಾರು ವರ್ಷಗಳ ಕಾಲ ವಿದೇಶಿಯರು ಆಳಿದರು ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಮಾನವರು ದೇಶದ ಸಂಪತ್ತಾಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯುವ ಅಗತ್ಯವಿದೆ ಎಂದರು.

ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮನೆಯೇ ಮೊದಲ ಪಾಠ ಶಾಲೆ. ಪಾಲಕರು ಅವರಿಗಾಗಿ ಹಣ, ಭೂಮಿ ಸೇರಿದಂತೆ ಇತರ ಸಂಪತ್ತು ನೀಡುವ ಬದಲು ಉತ್ತಮ ಶಿಕ್ಷಣ, ಮಾನವೀಯ ಮೌಲ್ಯ, ಸಂಸ್ಕಾರ, ಸದ್ಗುಣ ಬಾಲ್ಯದಿಂದಲೇ ಬಿತ್ತಬೇಕು ಎಂದರು.

ಸಾಮಾಜಿಕ ಪಿಡುಗು ಹೋಗಲಾಡಿಸುವ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡದೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಆಸ್ತಿಯನ್ನಾಗಿ ಮಾಡಬೇಕು.ಮಕ್ಕಳು ಉತ್ತಮ ಶಿಕ್ಷಣ ಪಡೆದರೆ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯ. ಮಾದಕ ವಸ್ತು, ಕಿಡಿಗೇಡಿಗಳ ಸಹವಾಸ ಮುಂದೊಂದು ದಿನ ಸಮಾಜದಲ್ಲಿ ಅಪರಾಧಿಯಾಗಿ ನಿಲ್ಲಿಸುತ್ತದೆ. ಹೀಗಾಗಿ ನಿಮ್ಮ ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಬೇಕು. ಶಿಸ್ತು, ಸಂಯಮ ಜತೆಗೆ ಪರಿಶ್ರಮವಿದ್ದಲ್ಲಿ ಸಾಧನೆ ತಾನಾಗಿಯೇ ಹೊಲಿಯುತ್ತದೆ. ಪಾಲಕರಿಗೆ ಗೌರವ ನೀಡುವ ಜತೆಗೆ ವೃದ್ಧಾಪ್ಯದಲ್ಲಿ ಅವರನ್ನು ಆರೈಕೆ ಮಾಡುವುದು ಮಕ್ಕಳ ಜವಾಬ್ದಾರಿಯಾಗಿದೆ ಎಂದರು.

ಶ್ರೀಮಠದ ಪೀಠಾಧಿಪತಿ ನಿರಂಜನ ಪ್ರಭು ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಅಕ್ಕನ ಬಳಗದ ಸದಸ್ಯರು ಸುಶ್ರಾವ್ಯವಾಗಿ ಪ್ರಾರ್ಥನ ಗೀತೆ ಹಾಡಿದರು.

ಯಲ್ಲಾಪುರ ಗುರುಲಿಂಗೇಶ್ವರ ಭಜನಾ ಮಂಡಳಿಯವರು ಭಜನಾ ಪದ ಹಾಡಿ ಭಕ್ತಿರಸದಲ್ಲಿ ಮುಂದೇಳುವಂತೆ ಮಾಡಿದರು.

ನೀಲಕಂಠೇಶ್ವರ ದೇವಸ್ಥಾನದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.