ಗ್ರಾಮ ಮಹಿಳೆಯರು ಮೌಢ್ಯಾಚರಣೆ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿರುವುದು ಶ್ಲಾಘನೀಯ ಹೆಜ್ಜೆ ಎಂದರು. ಹಳೆಯ ಕಂದಾಚಾರಗಳಿಂದ ಹೆಣ್ಣು ಮಕ್ಕಳು ದೈಹಿಕ-ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದು, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಿಂದ ವೈಜ್ಞಾನಿಕ ಚಿಂತನೆ ಬೆಳೆದು ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಬಹುದು ಎಂದು ತಿಳಿಸಿದರು. ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಸಂಪೂರ್ಣ ನಿಲ್ಲಬೇಕು; ಗ್ರಾಮ ಹಿರಿಯರು, ಪೂಜಾರಿಗಳು ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿಸದೇ, ಅವರ ಹಕ್ಕುಗಳು ಹಾಗೂ ಸಮಾನತೆಗಾಗಿ ಶಿಕ್ಷಣದ ಮೂಲಕ ಗಟ್ಟಿಗೊಳಿಸಿದರೆ ಮೌಢ್ಯಾಚರಣೆಗಳನ್ನು ಬೇರುಸಮೇತ ಕಿತ್ತೊಗೆಯಲು ಸಾಧ್ಯವೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ. ಕೆ. ಕರೆ ನೀಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಅರಸೀಕೆರೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಗಂಡಸಿ ಹೋಬಳಿಯ ಚೀಲನಹಳ್ಳಿ ಗೊಲ್ಲರಹಟ್ಟಿಯಲ್ಲಿ “ಮುಟ್ಟಿನ ಸಮಯ ಮತ್ತು ಹೆರಿಗೆಯ ನಂತರ ಮಹಿಳೆಯರನ್ನು ಊರಿನಿಂದ ಹೊರಗಿಡುವ ಅನಿಷ್ಟಾಚರಣೆ ನಿಷೇಧ” ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮ ಮಹಿಳೆಯರು ಮೌಢ್ಯಾಚರಣೆ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿರುವುದು ಶ್ಲಾಘನೀಯ ಹೆಜ್ಜೆ ಎಂದರು. ಹಳೆಯ ಕಂದಾಚಾರಗಳಿಂದ ಹೆಣ್ಣು ಮಕ್ಕಳು ದೈಹಿಕ-ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದು, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಿಂದ ವೈಜ್ಞಾನಿಕ ಚಿಂತನೆ ಬೆಳೆದು ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಬಹುದು ಎಂದು ತಿಳಿಸಿದರು. ದೇವರ ಹೆಸರಿನಲ್ಲಿ ನಡೆಯುವ ಶೋಷಣೆ ಸಂಪೂರ್ಣ ನಿಲ್ಲಬೇಕು; ಗ್ರಾಮ ಹಿರಿಯರು, ಪೂಜಾರಿಗಳು ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಗೊಲ್ಲ ಸಮುದಾಯದ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್‌ ಪ್ರಮಾಣ ಹೆಚ್ಚು ಕಾಣಿಸುತ್ತಿರುವುದರಿಂದ ಸ್ವಚ್ಛತೆ ಬಗ್ಗೆ ಜಾಗೃತಿ ಅಗತ್ಯವೆಂದರು. ಗಂಡಸಿ ಠಾಣೆಯ ಎಸ್‌ಐ ಆರತಿ ಟಿ, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸಂವಿಧಾನಾತ್ಮಕ ಹಕ್ಕುಗಳನ್ನು ಅರಿತು ಸಮಾಜದಲ್ಲಿ ಮುನ್ನಡೆಯಬೇಕು ಎಂದರು.ವಕೀಲ ಸಿದ್ದ ಮಲ್ಲಪ್ಪ, ೨೦೦೯ರಿಂದ ಮೌಢ್ಯಾಚರಣೆ ವಿರೋಧ ಹೋರಾಟ ನಡೆಸುತ್ತಿರುವುದಾಗಿ ಹೇಳಿ, ಗ್ರಾಮ ಮುಖಂಡರು ಒಮ್ಮತದಿಂದ ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಲು ಶಪಥ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.