ಸಾರಾಂಶ
ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮಗ್ಗುಲ ಶಾಲೆಯ ವತಿಯಿಂದ ಬಿಟ್ಟಂಗಾಲದ ಖಾಸಗಿ ಸ್ಥಳದಲ್ಲಿ ಚಿಣ್ಣರ ಕಲರವ ಸೀಸನ್ 2ರ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆವಿರಾಜಪೇಟೆ
ಶಿಕ್ಷಣ ಎಂಬುದು ವ್ಯಕ್ತಿಯನ್ನು ಸುಶಿಕ್ಷಿತನನ್ನಾಗಿ ಮಾಡುತ್ತದೆ. ಪ್ರತಿಭೆಗಳನ್ನು ಪ್ರದರ್ಶನ ಮಾಡುವುದರಿಂದ ಸಮಾಜವು ಗುರುತಿಸುವಂತಾಗುತ್ತದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಲಿಟಲ್ ಸ್ಕಾಲರ್ಸ್ ಆಕಾಡೆಮಿ ಮಗ್ಗುಲ ಶಾಲೆಯ ವತಿಯಿಂದ ನಗರದ ಹೊರ ವಲಯ ಬಿಟ್ಟಂಗಾಲದ ಖಾಸಗಿ ಸ್ಥಳದಲ್ಲಿ ಅಯೋಜಿಸಲಾಗಿದ್ದ ಚಿಣ್ಣರ ಕಲರವ ಸೀಸನ್ 2ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಿಕ್ಷಣದೊಂದಿಗೆ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಬೇಕು. ಇದರಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಹೊಮ್ಮಲು ಸಾಧ್ಯ. ಬಾಲ್ಯದಿಂದಲ್ಲೇ ಶಿಕ್ಷಣದೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿದಲ್ಲಿ ಸಮಾಜ ವಿವಿಧ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಸನ್ನದ್ಧನಾಗುತ್ತಾನೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುದರೋಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರಜೆಯಾಗಬೇಕೆಂದು ಬೋಪಯ್ಯ ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಶಿಲ್ಪಿಯು ಕಲ್ಲನ್ನು ಕೆತ್ತಿ ಸುಂದರ ಮೂರ್ತಿಯನ್ನು ನಿರ್ಮಾಣ ಮಾಡುವಂತೆ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯರೂಪಿಸಬೇಕು ಎಂದರು. ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ವನಜಾಕ್ಷಿ, ರಿಯಾಲಿಟಿ ಶೋ ಕಾಯಕ್ರಮ ಮಜಾ ಟಾಕೀಸ್ ಕಲಾವಿದೆ ರೇಮೋ ಮತ್ತು ಬಿಗ್ ಬಾಸ್ ಸ್ಪರ್ಧೆ ವಿಜೇತ ಪ್ರಥಮ್ ಪಾಲ್ಗೊಂಡು ಮಾತನಾಡಿದರು. ಲಿಟಲ್ ಸ್ಕಾಲರ್ಸ್ ಆಕಾಡೆಮಿಯ ಆಡಳಿತಾಧಿಕಾರಿ ಪ್ರಜೇಶ್ ಶಾಲೆಯ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಲಿಟಲ್ ಸ್ಕಾಲರ್ಸ್ ಆಕಾಡೆಮಿಯ ಅಧ್ಯಕ್ಷೆ ಪೂಜಾ ಸಜೇಶ್, ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಶಿಕ್ಷಣ ಇಲಾಖೆಯ ಅಧಿಕಾರಿ ಸುಶಾ ಹಾಜರಿದ್ದರು.ಕಿಂಡರ್ ಗಾರ್ಟನ್ ವಿಭಾಗದಿಂದ ಪಾಶ್ಚಾತ್ಯ ಫ್ಯಾಶನ್ ಶೋ, 1 ನೇ ತರಗತಿಯಿಂದ 4ನೇ ತರಗತಿಯ ವಿಭಾಗಕ್ಕೆ ರೆಟ್ರೋ ನೃತ್ಯ, 5 ನೇ ತರಗತಿಯಿಂದ 7ನೇ ತರಗತಿಯ ವಿಭಾಗಕ್ಕೆ ರಾಜ್ಯ ಜಾನಪದ ನೃತ್ಯ ಮತ್ತು 8 ನೇ ತರಗತಿಯಿಂದ 10 ನೇ ತರಗತಿ ವಿಭಾಗಗಕ್ಕೆ ಸಾಂಪ್ರದಾಯಿಕ ಫ್ಯಾಶನ್ ಶೋ ಸ್ಪರ್ಧೆಗಳು ನಡೆದವು. ವಿಜೇತರಿಗೆ ಪರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿಸಲಾಯಿತು. ಶಿಕ್ಷಕಿ ಸ್ವಾತಿ ಸ್ವಾಗತಿಸಿ, ವಂದಿಸಿದರು.