ಕಡೂರು ಸರ್ಕಾರಿ ಶಾಲೆ ಶಿಕ್ಷಣ ವೆಚ್ಚವೆ ದುಬಾರಿಯಾಗಿದ್ದು, ಖಾಸಗಿ ಶಾಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.

- ಜ್ಞಾನಭಾರತಿ ಹೋಂ ಪಾರ್ ಎಜುಕೇಷನ್ ಸಂಸ್ಥೆಯಿಂದ ‘ಜ್ಞಾನ ತರಂಗ’

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ಶಾಲೆ ಶಿಕ್ಷಣ ವೆಚ್ಚವೆ ದುಬಾರಿಯಾಗಿದ್ದು, ಖಾಸಗಿ ಶಾಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಜ್ಞಾನಭಾರತಿ ಹೋಂ ಪಾರ್ ಎಜುಕೇಷನ್ ಸಂಸ್ಥೆಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಜ್ಞಾನ ತರಂಗ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜ್ಞಾನಭಾರತಿ ಶಾಲೆಯಲ್ಲಿ ಮಕ್ಕಳಿಗೆ ವರ್ಷಕ್ಕೆ ₹20 ಸಾವಿರ ಪಡೆದು ಶಿಕ್ಷಣ ನೀಡಿದರೆ ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯ ಓರ್ವ ವಿದ್ಯಾರ್ಥಿಗೆ ₹77 ಸಾವಿರ ವೆಚ್ಚವಾಗುತ್ತದೆ, ಪ್ರೌಢಶಾಲೆ ಓರ್ವ ವಿದ್ಯಾರ್ಥಿಗೆ ₹1 ಲಕ್ಷ ವೆಚ್ಚವಾಗುತ್ತದೆ. (ಶಿಕ್ಷಕರಿಗೆ ನೀಡುವ ಸಂಬಳ, ಬಿಸಿಊಟ ಮತ್ತಿತರ ವೆಚ್ಚ ಸೇರಿ ) ಈ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡಿಮೆ ವೆಚ್ಚದ ಶಿಕ್ಷಣ ನೀಡುತ್ತಿವೆ ಎಂದು ವಿವರ ನೀಡಿದರು. ದೇಶದಲ್ಲಿ 75 ವರ್ಷಗಳ ಹಿಂದೆ ಸಾಕ್ಷರತೆ ಪ್ರಮಾಣ ಶೇ. 11 ಇತ್ತು. ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಇಂದು ದೇಶದಲ್ಲಿ ಸಾಕ್ಷರತೆ ಶೇ. 80ಕ್ಕೆ ಏರಿಕೆ ಕಂಡಿದೆ. ಇದಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಕಡೂರು ಕ್ಷೇತ್ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 8 ನೇ ಸ್ಥಾನದಲ್ಲಿತ್ತು. ಈ ಭಾರಿ ಮೊದಲ ಮೂರು ಸ್ಥಾನಕ್ಕೆ ತರಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇವೆ. ಬಿಇಒಗಳು ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಹಾಕಿ ಉತ್ತಮ ಫಲಿತಾಂಶ ನೀಡಲು ಶ್ರಮಿಸಬೇಕು. ತೀವ್ರ ಹೆಚ್ಚಿನ ಒತ್ತಡ ಬೇಡ ಎಂದು ಹೇಳಿ ಶಿಕ್ಷಕರಿಲ್ಲದೆ ರಾಜಕಾರಣ ಇಲ್ಲ ಎಂದು ನಗೆ ಬೀರಿದರು. ಮಕ್ಕಳು ಶಿಕ್ಷಣದ ಜೊತೆಗೆ ದೇಶಾಭಿಮಾನ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದರೆ ಅವರ ಪ್ರತಿಭೆಗೆ ಅನುಸಾರ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜ್ಞಾನಭಾರತಿ ಸಂಸ್ಥೆ ಶರತ್‌ ಕೃಷ್ಣಮೂರ್ತಿ ಅವರ ತಂಡ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಸಂಸ್ಥೆಗೆ ನಮ್ಮ ಕೈಲಾದ ಯಾವುದೇ ಸಹಕಾರ ನೀಡಲು ತಾವು ಸದಾ ಸಿದ್ದ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಕಡೂರಿನಲ್ಲಿ ಮೊದಲ ಬಾರಿಗೆ ಇಂಗ್ಲೀಷ್ ಮಾದ್ಯಮ ಹೈವೇ ಶಾಲೆ ತೆರೆದ ನಂತರ ಜ್ಞಾನಭಾರತಿ ಶಾಲೆ ಆರಂಭವಾಯಿತು. ಇತ್ತೀಚೆಗೆ ಹತ್ತಾರು ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಜ್ಞಾನಭಾರತಿ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿತ್ತು. ಆದರೆ ಕೆಲವು ವರ್ಷಗಳು ಅನೇಕ ಸಮಸ್ಯೆಯಿಂದ ಶಿಕ್ಷಣ ಸಂಸ್ಥೆ ಬಳಲಿದ್ದು ನಂತರ ಶರತ್‌ ಕೃಷ್ಣಮೂರ್ತಿ ಕಾರ್ಯದರ್ಶಿಗಳಾದ ನಂತರ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ.

ಇಲ್ಲಿ ಕಳೆದ 29 ವರ್ಷಗಳಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರ್, ವೈದ್ಯರಾಗಿ ಹಾಗೂ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಸಭೆಯಲ್ಲಿ ಇರುವ ಇಬ್ಬರು ವೈದ್ಯರೆ ಉದಾಹರಣೆಯಾಗಿದ್ದಾರೆ. ಈ ಸಂಸ್ಥೆ ಸೇವಾ ಮನೋಭಾವ ಇಟ್ಟುಕೊಂಡು ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸುತ್ತೇನೆ ಎಂದರು.

ಸಂಸ್ಥೆ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಶರತ್‌ಕೃಷ್ಣಮೂರ್ತಿ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಈಗಿನ ಸ್ಪರ್ಧಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಬಗ್ಗೆ ಹಾಗೂ ಪೋಷಕರ ಸಹಕಾರದ ಬಗ್ಗೆ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ಪುರಸಭೆ ಮಾಜಿ ಸದಸ್ಯ ಮಂಜುನಾಥ್, ಸಂಸ್ಥೆ ಉಪಾಧ್ಯಕ್ಷ ಪುಂಡಲಿಕರಾವ್ ಸಂಸ್ಥೆಯ ಬಗ್ಗೆ ಮಾತನಾಡಿದರು. ಇದೇ ಶಾಲೆಯಲ್ಲಿ ಕಲಿತು ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶರತ್.ಆರ್ ಯಜಮಾನ್ ಮತ್ತು ಡಾ.ಎಸ್.ಎಂ.ಅರುಣ್ ಅವರನ್ನು ಸಂಸ್ಥೆ ಸನ್ಮಾನಿಸಿ ಗೌರವಿಸಿತು. ಪುರಸಭೆ ಮಾಜಿ ಸದಸ್ಯೆ ಪುಷ್ಪ್ಪಲತಾ ಮಂಜುನಾಥ್, ಶಾಲೆ ಮುಖ್ಯ ಶಿಕ್ಷಕಿ ರಜಿಯಾಬಾನು, ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ಇದ್ದರು.28ಕೆೆೆಕೆಡಿಯು2.

ಕಡೂರು ಜ್ಞಾನ ಭಾರತಿ ಇಂಗ್ಲೀಷ್ ಶಾಲೆ ಜ್ಞಾನ ತರಂಗ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿಶ್ರೀನಿವಾಸ್, ಸುಜಾತಾ ಕೃಷ್ಣಮೂರ್ತಿ, ಡಾ.ಶರತ್.ಆರ್ ಯಜಮಾನ್, ಡಾ.ಅರುಣ್,ಶರತ್ ಕೃಷ್ಣಮೂರ್ತಿ,ಮಂಜುನಾಥ್ ಇದ್ದರು.