ಯಲಬುರ್ಗಾ: ಶಿಕ್ಷಣವು ಸಮಾಜದ ಪ್ರಗತಿಯ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ವಿದ್ಯಾಭ್ಯಾಸದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಮುಸ್ಲಿಂ ಕಮಿಟಿ ತಾಲೂಕಾಧ್ಯಕ್ಷ ಎಚ್.ಎಚ್. ಹಿರೇಮನಿ ಹೇಳಿದರು.

ಪಟ್ಟಣದ ಬಂಡಿ ರಸ್ತೆಯಲ್ಲಿರುವ ಶಾದಿಮಹಲ್‌ನಲ್ಲಿ ಭಾನುವಾರ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ, ಮುಸ್ಲಿಂ ಕಮೀಟಿ, ಅಹಲೇ ಸುನ್ನತ್ (ಸುನ್ನಿ) ಜಮೀಯಾ ಮಸೀದಿ ಕಮೀಟಿ ಹಾಗೂ ಹಜರತ್ ಅಷ್ರಫ್ ಅಲಿ ವಲಿಯವರ ದರ್ಗಾ ಕಮಿಟಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಓಡದೇ ಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯ ಹಾಗೂ ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸಮಾಜದ ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಜಿಲ್ಲಾ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಮುಕ್ತುಂಸಾಬ್‌ ಜಮಾದಾರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣದ ಅವಕಾಶ ಲಭ್ಯವಾಗಬೇಕು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕಾರ್ಯ ಸಂಘ ಮುಂದುವರಿಸಲಿದೆ ಎಂದು ತಿಳಿಸಿದರು.

ಮುಖಂಡ ಎಂ.ಎಫ್.ನದಾಫ್ ಮಾತನಾಡಿ, ಶಿಕ್ಷಣದ ಜಾಗೃತಿ ಹೆಚ್ಚಿದಾಗ ಮಾತ್ರ ಸಮಾಜ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಅವರನ್ನು ಉನ್ನತ ಹುದ್ದೆಗಳಿಗೆ ತಲುಪುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.


ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಖಾದರಸಾಬ್ ನೂರಭಾಷಾ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು. ಅವರ ಮುಂದಿನ ಸಾಧನೆಗೆ ಸ್ಫೂರ್ತಿಯಾಗುತ್ತದೆ. ವಿದ್ಯಾರ್ಥಿಗಳು ದುಷ್ಪ್ರವೃತ್ತಿಗಳಿಂದ ದೂರವಿದ್ದು ಶಿಕ್ಷಣದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಅರಣ್ಯಾಧಿಕಾರಿ ಶರೀಫ್ ಕೊತ್ವಾಲ್ ಮಾತನಾಡಿ, ಯುವಕರು ಸರ್ಕಾರಿ ಸೇವೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಆಸಕ್ತಿ ತೋರಬೇಕು. ಗುರಿ ಸ್ಪಷ್ಟವಾಗಿದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ಹೇಳಿದರು.

ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಇರ್ಷಾದ್ ಖಾಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಸಿಆರ್‌ಪಿ ಹುಸೇನ್‌ಸಾಬ್ ಭಾಗವಾನ್, ಅಕ್ತರಸಾಬ ಖಾಜಿ, ಬಾಬುಸಾಬ ಕುಂದಗೋಳ, ಅಜ್ಮೀರಸಾಬ ನಂದಾಪೂರ, ಶ್ಯಾಮೀದಸಾಬ್‌ ಮುಲ್ಲಾ, ಬಾಬುಸಾಬ್‌ ಮಂಡಲಗೇರಿ, ಮೆಹಬೂಬಸಾಬ್‌ ಮಕಾಂದರ, ರಷೀದಸಾಬ್‌ ಹಣಜಗಿ, ರಪೀಸಾಬ್‌ ಉಮಚಗಿ, ಶಿರಸ್ತೇದಾರ ಮುಸ್ತಾಫಸಾಬ್‌, ಭಾಷಾ ಅಲಿ, ರಿಯಾಜ್ ಖಾಜಿ, ಚಿನ್ನುಭಾಷಾ, ಪೀರಸಾಬ್‌ ದಫೇದ ಸೇರಿದಂತೆ ಇತರರು ಇದ್ದರು.