ಎಜುಕೇಷನ್‌ ಎಕ್ಸ್‌ಪೋಗೆ ಆಗಮಿಸಿದ್ದ ಪೋಷಕರು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯುತ್ತಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಆಯೋಜಿಸಿರುವ ಎಜುಕೇಷನ್‌ ಎಕ್ಸ್‌ಪೋ ವಿದ್ಯಾರ್ಥಿಗಳಿಗಿರುವ ಅವಕಾಶಗಳನ್ನು ಅನಾವರಣಗೊಳಿಸಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಮಲ್ಲೇಶ್ವರಂ ವೃತ್ತದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 6ನೇ ಆವೃತ್ತಿಯ 2 ದಿನಗಳ ‘ಸುವರ್ಣ ಶಿಕ್ಷಣ ಎಜುಕೇಷನ್‌ ಎಕ್ಸ್‌ಪೋಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉನ್ನತ ಶಿಕ್ಷಣಕ್ಕೆ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ನಿವಾರಿಸಲು ಆಯೋಜಿಸಿರುವ ‘ಎಜುಕೇಷನ್‌ ಎಕ್ಸ್‌ಪೋದಲ್ಲಿ ಪ್ರತಿಷ್ಠಿತ ಕಾಲೇಜುಗಳು, ವಿವಿಗಳನ್ನು ಒಂದೇ ಸೂರಿನಡಿ ತಂದು ಮಾಹಿತಿ ನೀಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಊಹಿಸಲೂ ಆಗದಂತಹ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕೃತಕ ಬುದ್ಧಿಮತ್ತೆ(ಎಐ) ಇಂದು ಎಲ್ಲೆಡೆ ಪ್ರಾಮುಖ್ಯತೆ ಪಡೆಯುತ್ತಿದೆ. ಆದ್ದರಿಂದ ಯಾವ ರೀತಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಶಿಕ್ಷಣ ತಜ್ಞರ ಜೊತೆ ಇಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಚರ್ಚಿಸಬಹುದು ಎಂದು ಸಲಹೆ ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ಒಂದೇ ಸೂರಿನಡಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ತಮ್ಮ ಭವಿಷ್ಯ ರೂಪಿಕೊಳ್ಳಲು ವಿದ್ಯಾರ್ಥಿಗಳು ಇಲ್ಲಿ ಸುಲಭವಾಗಿ, ಸರಳವಾಗಿ ಮಾಹಿತಿ ಪಡೆಯಬಹುದು. ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಪ್ರತಿ ವರ್ಷ ಉತ್ತಮವಾಗಿ ಎಜುಕೇಷನ್‌ ಎಕ್ಸ್‌ಪೋ ಹಮ್ಮಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಐಎಫ್‌ಎಸ್‌ನಲ್ಲಿ ಭಾರತದಲ್ಲಿ ಮೊದಲ ರ್‍ಯಾಂಕ್‌ ಪಡೆದ ಬಸವರಾಜ್‌ ಕೆಂಪವಾಡ್‌ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ನೂರಕ್ಕೂ ಅಧಿಕ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಎಕ್ಸ್‌ಪೋದಲ್ಲಿ ಭಾಗಿಯಾಗಿವೆ. ಸಾರ್ವಜನಿಕರಿಗೆ ಮುಕ್ತ ಪವೇಶವಿದ್ದು, ಭಾನುವಾರ ಸಂಜೆ 6 ಗಂಟೆಗೆ ಎಕ್ಸ್‌ಪೋಗೆ ತೆರೆ ಬೀಳಲಿದೆ. ಈ ವೇಳೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

ಕನ್ನಡ ಪ್ರಭ, ಏಷ್ಯಾನೆಟ್‌ ಸುವರ್ಣ

ನ್ಯೂಸ್‌ಗೆ ಮಾಸ್ಟರ್ ಆನಂದ್‌ ಶ್ಲಾಘನೆ

ಮಾಹಿತಿ ಪಡೆಯಬೇಕೆಂದರೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾಲೇಜುಗಳು, ವಿಶ್ವವಿದ್ಯಾನಿಲಯಗಳ ಬಳಿ ತೆರಳಬೇಕಾಗುತ್ತದೆ. ಆದರೆ ಇಲ್ಲಿ ಕಾಲೇಜುಗಳು, ವಿವಿಗಳ ಸಂಗಮವಾಗಿದೆ ಎಂದು ನಟ ಮಾಸ್ಟರ್‌ ಆನಂದ್‌ ಬಣ್ಣಿಸಿದರು. ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಈ ಕಾರ್ಯ ಶ್ಲಾಘನೀಯವಾಗಿದೆ. ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿವರ ಪಡೆಯುವುದಕ್ಕಿಂತ ಇಲ್ಲಿಗೆ ಆಗಮಿಸಿದರೆ ವಿದ್ಯಾರ್ಥಿಗಳು ತಮಗಿರುವ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಮಕ್ಕಳ ಉಜ್ವಲ ಭವಿಷ್ಯಕ್ಕೆ

ಎಕ್ಸ್‌ಪೋಗಳ ಅಗತ್ಯ: ರಂಜನಿ

ರಂಜನಿ ರಾಘವನ್‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಗುರುವಿನ ಸ್ಥಾನದಲ್ಲಿ ನಿಂತು ಈ ಎಕ್ಸ್‌ಪೋ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ. ಇದನ್ನು ನೋಡಿ ಬಹಳ ಸಂತಸವಾಯಿತು ಎಂದು ನಟಿ ರಂಜನಿ ರಾಘವನ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ಯುವ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಇಂತಹ ಎಕ್ಸ್‌ಪೋಗಳ ಅವಶ್ಯಕತೆ ಇದೆ ಎಂದರು.

ಕಂಪ್ಯೂಟರ್‌ ಕೋರ್ಸ್‌ ಪ್ರವೇಶಾತಿಗೆ ಮಿತಿ-ಸುಧಾಕರ್‌

ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದ್ದು, ಉದ್ಯೋಗ ಸಿಗುವ ಪ್ರಮಾಣ ಕಡಿಮೆಯಾಗಿದೆ. ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗಳ ಪ್ರವೇಶ ಮಿತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ತಜ್ಞರ ಸಮಿತಿಯು ತನ್ನ ವರದಿ ನೀಡಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ನ ಕೋರ್ಸ್‌ಗಳನ್ನು ಐದಕ್ಕೆ ಮಿತಿಗೊಳಿಸುವುದು, ಪ್ರವೇಶಾತಿ 900 ಸೀಟುಗಳನ್ನು ಮೀರಬಾರದು ಎಂದು ವರದಿ ಹೇಳಿದೆ. ಇದನ್ನು ಜಾರಿಗೊಳಿಸಲಾಗುವುದು ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮಲ್ಲೇಶ್ವರಂನಲ್ಲಿ ಆಯೋಜಿಸಿದ್ದ ‘ಸುವರ್ಣ ಶಿಕ್ಷಣ ಎಜ್ಯುಕೇಷನ್‌ ಎಕ್ಸ್‌ಪೋ’ಗೆ ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಚಾಲನೆ ನೀಡಿದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ, ನಟ ಮಾಸ್ಟರ್‌ ಆನಂದ್‌, ನಟಿ ರಂಜನಿ ರಾಘವನ್‌ ಮತ್ತಿತರರು ಹಾಜರಿದ್ದರು.