ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸುತ್ತೂರು ಕ್ಷೇತ್ರದ ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣವೇ ಧರ್ಮ, ಶಿಕ್ಷಣವೇ ಆಚಾರ, ಶಿಕ್ಷಣವೇ ಸಮಾಜ ಸುಧಾರಣೆಯ ಬಹು ಮುಖ್ಯ ಮಾರ್ಗ ಎಂಬುದನ್ನು ಅಕ್ಷರಶಃ ಅರಿತು, ಬೃಹತ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರಾಜಗುರುತಿಲಕ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಮಹತ್ವದ್ದಾಗಿದೆ ಎಂದು ಶ್ರೀ ಕಲ್ಯಾಣಸ್ವಾಮಿಗಳು ತಿಳಿಸಿದರು.ತಾಲೂಕಿನ ತೇಜೂರು ಶ್ರೀ ಸಿದ್ದರಾಮೇಶ್ವರ ಮಠದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಸ್ವಾಮಿಗಳ ೧೧೦ನೇ ಜಯಂತಿ ಕಾರ್ಯಕ್ರಮ, ಮಹಾಲಯ ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಚಿಂತನಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಪೂಜ್ಯರು ೧೨ನೇ ವಯಸ್ಸಿನಲ್ಲೇ ಸುತ್ತೂರು ವೀರಸಿಂಹಾಸನ ಮಠದ ೨೩ನೇ ಪೀಠಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದರು. ನಂತರ ತಮ್ಮ ಗುರುಗಳಾದ ಮಂತ್ರಮಹರ್ಷಿ ಪಟ್ಟದ ಶಿವರಾತ್ರಿ ಮಹಾಸ್ವಾಮೀಜಿಯವರ ನಿರ್ದೇಶನದಂತೆ ಮೈಸೂರಿನಲ್ಲಿದ್ದ ನಮಃ ಶಿವಾಯ ಮಠದಲ್ಲಿದ್ದು, ಕ್ಯಾತನಹಳ್ಳಿ ಪೂಜ್ಯರ ಒಡನಾಡಿಯಾಗಿ ವಿದ್ಯಾಭ್ಯಾಸ ಮಾಡಿದ್ದರು. ೧೯೪೧ರಲ್ಲಿ ಮಠದ ಸಂಪೂರ್ಣ ಹೊಣೆಗಾರಿಕೆಯನ್ನು ವಹಿಸಿಕೊಂಡ ಶ್ರೀಗಳು ಮೊಟ್ಟ ಮೊದಲು ಅನಾಥ ಮಕ್ಕಳ ಶಾಲೆ ತೆರೆದರು. ನಂತರ ೧೯೫೦ರಲ್ಲಿ ಕಾಲೇಜನ್ನು ತೆರೆದು ಗ್ರಾಮೀಣ ಪ್ರದೇಶದ ವಂಚಿತ ಸಮುದಾಯಕ್ಕೆ ಶಿಕ್ಷಣ ನೀಡಿದರು. ೧೯೫೪ರಲ್ಲಿ ಜೆಎಸ್ ಎಸ್ ವಿದ್ಯಾಪೀಠವನ್ನು ಸ್ಥಾಪಿಸಿದರು.ತಮಗಾಗಿ ಏನನ್ನೂ ಬಯಸದೆ, ಸಮಾಜದ ಸರ್ವರ ಯೋಗಕ್ಷೇಮಕ್ಕಾಗಿ ದುಡಿಯಲು ಆರಂಭಿಸಿದ ರಾಜೇಂದ್ರ ಶ್ರೀಗಳು ಏಕಕಾಲದಲ್ಲಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಚಕ್ರವರ್ತಿಗಳಾಗಿ ಮೆರೆದವರು. ಸ್ವಾರ್ಥ, ಅಸೂಯೆಗಳಿಲ್ಲದ ಅವರ ಸೇವಾಪರ ಚಿಂತನೆಯ ಪ್ರತೀಕವೇ ಜಗತ್ತಿನಾದ್ಯಂತ ಇಂದು ಹೆಮ್ಮರವಾಗಿ ಬೆಳೆದಿರುವ ಜೆಎಸ್‌ಎಸ್ ಸಂಸ್ಥೆಯ ಆರಂಭಿಸಿದ ದಿನಗಳಲ್ಲಿ ಒಮ್ಮೆ ವಸತಿನಿಲಯದ ಮಕ್ಕಳಿಗೆ ಪ್ರಸಾದ ತಯಾರು ಮಾಡಲು ಹಣವಿಲ್ಲದೆ, ತಮ್ಮ ಬಂಗಾರದ ಕರಡಿಗೆಯನ್ನು (ಇಷ್ಟಲಿಂಗ ಇಡುವ ಪೆಟ್ಟಿಗೆ) ಮಾರಾಟ ಮಾಡಿ, ಆ ಹಣದಲ್ಲಿ ದಾಸೋಹ ನಡೆಸಿದವರು ರಾಜೇಂದ್ರ ಶ್ರೀಗಳು. ಅವರಿಗಿದ್ದ ಸಾಮಾಜಿಕ ಕಳಕಳಿಗೆ ಇದೊಂದು ಉತ್ತಮ ಉದಾಹರಣೆ ಎಂದು ಸುದೀರ್ಘವಾಗಿ ಮಾತನಾಡಿ, ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಸಮಾಜಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರಿಗೆ ೧೯೭೦ ರಲ್ಲಿ ’ರಾಜಗುರುತಿಲಕ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಜತೆಗೆ ಮರಣೋತ್ತರವಾಗಿ, ಮೈಸೂರು ವಿಶ್ವವಿದ್ಯಾನಿಲಯವು ೧೯೮೯ ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು ಎಂದು ವಿವರಿಸಿದರು.ತೇಜೂರು ಶ್ರೀ ಸಿದ್ಧರಾಮೇಶ್ವರ ಮಠದ ದಿವ್ಯ ಸಾನಿಧ್ಯದಲ್ಲಿ ಪೂಜ್ಯ ಶ್ರೀ ಕಲ್ಯಾಣಸ್ವಾಮಿಗಳ ಉಪಸ್ಥಿತಿಯಲ್ಲಿ ಚಿಂತನಗೋಷ್ಠಿ ಹಾಗೂ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮ ಪ್ರಯುಕ್ತ ಶ್ರೀ ಸಿದ್ದರಾಮೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ವೈಭವದಿಂದ ನಡೆಯಿತು. ಪೂಜಾ ಮಹೋತ್ಸವದಲ್ಲಿ ಗ್ರಾಮಸ್ಥರು ಹಾಗೂ ಶ್ರೀಮಠದ ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.