ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾರ್ಮಿಕರು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ವಂಚಿತರಾಗಿದ್ದಾರೆ. ಕಾರ್ಮಿಕರ ಬದುಕಿನಲ್ಲಿ ಪರಿಸ್ಥಿತಿ ಗಮನಿಸಿದಾಗ ಭಾರತದಲ್ಲಿ ಜವಾಬ್ದಾರಿಯನ್ನು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಐಸಿಸಿಟಿಯು ಸಂಘಟನೆಯ ಕೇಂದ್ರ ಸಮಿತಿಯ ಕ್ಲಿಫ್ಟನ್ ರೊಜಾರಿಯೋ ಹೇಳಿದ್ದಾರೆ.ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಅಖಿಲ ಭಾರತ ಕಾರ್ಮಿಕ ಸಂಘಟನೆ ವತಿಯಿಂದ ವಿರಾಜಪೇಟೆ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿವಾಗಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಎಲ್ಲಾ ಜನರಿಗೂ ಆಹಾರ ಮತ್ತು ಉದ್ಯೋಗ ಒದಗಿಸುವಂತಾಗಬೇಕು. ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ನಿರುದ್ಯೋಗಿಗಳಿಗೆ ಕೂಡಲೆ ಉದ್ಯೋಗ ನೀಡಬೇಕು. ಕನಿಷ್ಠ ವೇತನ ರು. ೩೫ ಸಾವಿರ ನಿಗದಿ ಮಾಡಬೇಕು, ಗುತ್ತಿಗೆ ಪದ್ದತಿ ರದ್ದಾಗಬೇಕು, ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂದು ಆಗ್ರಹಿಸಿದರು.
ಎಐಸಿಸಿಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಕೆ.ಮೋಹನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು ಲೈನ್ ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಅವರ ಸಾಲ ಮನ್ನಾ ಮಾಡಬೇಕು, ಸರ್ಕಾರ ಸ್ವಂತ ಮನೆ ಕಟ್ಟಿ ಕೊಡುವಂತೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.ಇದಕ್ಕೂ ಮೊದಲು ಕಾರ್ಮಿಕರು ತಾಲೂಕು ಮೈದಾನದಿಂದ ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿಯಿಂದ ಮುಖ್ಯರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣ, ಸುಣ್ಣದಬೀದಿ, ಗೋಣಿಕೊಪ್ಪರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಟಿಚೌಕಿ ಮಾರ್ಗವಾಗಿ ತಾಲೂಕು ಮೈದಾನದ ವರೆಗೂ ಮೆರವಣಿಗೆ ನಡೆಸಿ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯ ಸುಬ್ಬ, ಸಂಘಟನೆಯ ಉಪಾಧ್ಯಕ್ಷ ತೋಲ, ಆದಿವಾಸಿ ಸಂಘದ ಕಾರ್ಯದರ್ಶಿ ಗೌರಿ, ಉಪಕಾರ್ಯದರ್ಶಿ ಬೊಳ್ಕ , ಆದಿವಾಸಿ ಸಂಘಟನೆಯ ಕುಮಾರ, ಕಾವಲ ಹಾಗೂ ಸಂಘದ ಸದಸ್ಯರು ಮಾತನಾಡಿದರು.