ಪ್ರಾಥಮಿಕ ಶಾಲೆ ನಂ. ೧ ಈಗ ಸಾಕಷ್ಟು ಬದಲಾವಣೆಯಾಗಿದೆ. ವಿದ್ಯೆ ನೀಡಿದ ಗುರುವನ್ನು, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಈ ಶಾಲೆಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದು ರಾಜಕುಮಾರ ಅಗಡಿ ತಿಳಿಸಿದರು.

ಲಕ್ಷ್ಮೇಶ್ವರ: ಸಮಾಜದಲ್ಲಿ ಉತ್ತಮ ಶಿಕ್ಷಣ ಪಡೆಯುವುದು ಎಲ್ಲರ ಹಕ್ಕಾಗಿದೆ. ಶಿಕ್ಷಣ ಜಗತ್ತಿನ ಅತಿದೊಡ್ಡ ಶಕ್ತಿಯಾಗಿದೆ. ಇದರಿಂದ ಯಾರು ವಂಚಿತರಾಗಬಾರದು. ವಿದ್ಯೆಗೆ ಬಡವ, ಬಲ್ಲಿದ, ಎಂಬ ಭೇದಭಾವಗಳಿರುವುದಿಲ್ಲ. ಮಕ್ಕಳು ಉತ್ತಮ ಶಿಕ್ಷಣ ಪಡೆದು ದೇಶದ ಶ್ರೇಷ್ಠ ನಾಗರಿಕರಾಗಬೇಕು ಎಂದು ಬೆಂಗಳೂರಿನ ಉದ್ಯಮಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧ರ ಹಳೆಯ ವಿದ್ಯಾರ್ಥಿ ರಾಜಕುಮಾರ ಅಗಡಿ ತಿಳಿಸಿದರು.

ಮಂಗಳವಾರ ಪಟ್ಟಣದಲ್ಲಿ ಸುಮಾರು ೬೦- ೬೫ ವರ್ಷಗಳ ಹಿಂದೆ ತಾವು ಪ್ರಾಥಮಿಕ ಶಿಕ್ಷಣ ಪಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧ಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಶಾಲೆಯನ್ನು ವೀಕ್ಷಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾವು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆಯಲ್ಲಿ ಸೌಲಭ್ಯಗಳ ಕೊರತೆ, ಮನೆಯಲ್ಲಿ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆ ಇತ್ಯಾದಿಗಳಿಂದ ಅನೇಕರು ಶಿಕ್ಷಣ ವಂಚಿತರಾಗುತ್ತಿದ್ದರು. ಆದರೆ ಇದೀಗ ಸೌಲಭ್ಯಗಳು ಸಾಕಷ್ಟು ದೊರೆಯುತ್ತಿದ್ದು, ಅದರಂತೆ ಮಕ್ಕಳು ವಿದ್ಯಾಭ್ಯಾಸ ಮಾಡುವುದಕ್ಕೆ ಆದ್ಯತೆ ನೀಡುವುದು ಅವಶ್ಯವಾಗಿದೆ ಎಂದರು.

ಪ್ರಾಥಮಿಕ ಶಾಲೆ ನಂ. ೧ ಈಗ ಸಾಕಷ್ಟು ಬದಲಾವಣೆಯಾಗಿದೆ. ವಿದ್ಯೆ ನೀಡಿದ ಗುರುವನ್ನು, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಈ ಶಾಲೆಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.ಶಂಕರ ಬ್ಯಾಡಗಿ ಮಾತನಾಡಿ, ೧೮೭೨ರಲ್ಲಿ ಪ್ರಾರಂಭವಾದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧ ಹಲವಾರು ಮಹನಿಯರ ದಾನಿಗಳ ಸಹಕಾರದಿಂದ ಅನೇಕ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆದಿವೆ. ಸುಮಾರು ೬ ದಶಕಗಳ ಹಿಂದೆ ಕಲಿತ ಶಾಲೆಯ ಬಗ್ಗೆ ಅಭಿಮಾನದಿಂದ ಆಗಮಿಸಿದ ರಾಜಕುಮಾರ ಅಗಡಿ ಬೆಂಗಳೂರಿನಲ್ಲಿ ಶ್ರೇಷ್ಠ ಹೆಸರು ಮಾಡಿದ್ದು, ಅಂಥವರ ಸಹಕಾರ ಈ ಶಾಲೆಗೆ ದೊರಕಲಿ ಎಂದರು.

ಈ ವೇಳೆ ರಾಜಕುಮಾರ ಅವರ ಸಹೋದರಿ ಹಾಗೂ ಹಳೆಯ ವಿದ್ಯಾರ್ಥಿನಿ ಶುಭಾವತಿ, ರಾಜಕುಮಾರ ಅವರ ಪತ್ನಿ ಶೋಭಾ ಅಗಡಿ, ಕವಿತಾ ಮಂದನಾ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ, ಎಂ.ಆರ್. ಪಾಟೀಲ, ದಿಗಂಬರ ಪೂಜಾರ, ಗಿರೀಶ ಅಗಡಿ, ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ, ಶಿಕ್ಷಕ ಎಸ್ತೇರ್ ಪೀಟರ್, ರಾಜೇಶ್ವರಿ ಅಡರಕಟ್ಟಿ, ಸವಿತಾ ಬೋಮಲೆ, ಅಕ್ಷತಾ ಕಾಟೇಗಾರ, ಆಯೇಷಾ ನದಾಫ ಎಸ್.ಎಸ್. ಮಹಾಲಿಂಗಶೆಟ್ಟರ ಇದ್ದರು.