ವ್ಯಕ್ತಿ, ಸಮಾಜ ಪರಿವರ್ತಿಸುವ ಶಕ್ತಿ ಶಿಕ್ಷಣಕ್ಕಿದೆ

| Published : Sep 07 2024, 01:43 AM IST

ಸಾರಾಂಶ

ಶಿಕ್ಷಕರು ಬೋಧನೆಯ ಜೊತೆಗೆ ಮಾರ್ಗದರ್ಶಕರಾಗಿ ಸತ್ಯಾನ್ವೇಷಣೆಯುತ್ತ ಮಕ್ಕಳನ್ನು ಉತ್ತೇಜಿಸುವ ತತ್ವಜ್ಞಾನಿಗಳಾಗಿ ಸಮತೂಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಣವು ವ್ಯಕ್ತಿ ಮತ್ತು ಸಮಾಜ ಪರಿವರ್ತನೆಯ ಒಂದು ಶಕ್ತಿಯುತ ಸಾಧನವಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬುದ್ಧ ಭಗವಾನರಿಂದ ಇಂದಿನವರೆಗೆ ನಮ್ಮ ದೇಶವು ಉದಾತ್ತ ಗುರುಪರಂಪರೆಯನ್ನು ಹೊಂದಿದ್ದು ಪರಂಪರೆಯ ಮೌಲ್ಯಗಳಾದ ಜ್ಞಾನ, ವಿಜ್ಞಾನ, ಕಾಯಕ, ಚಿಂತನೆ ಮತ್ತು ಸೇವೆಯನ್ನು ಶಿಕ್ಷಕ ವೃತ್ತಿಯಲ್ಲಿ ಸಮನ್ವಯಿಸಿಕೊಳ್ಳಬೇಕೆಂದು ಶಾಂತಾ ವಿದ್ಯಾ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರದ ಶಾಂತಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ, ಅಧ್ಯಾಪಕರಿಗೆ ಉಡುಗೊರೆಗಳನ್ನು ವಿತರಿಸಿ ಮಾತನಾಡಿದರು.

ಶಿಕ್ಷಕ ವೃತ್ತಿಗೆ ಘನತೆ

ಗುರುಗಳ ಸ್ಥಾನ ಮತ್ತು ಜವಾಬ್ದಾರಿಯು ಅತ್ಯಂತ ಉದಾತ್ತವಾಗಿದ್ದು ಶಿಕ್ಷಕ ಸಮುದಾಯ ಈ ಪರಂಪರೆಯನ್ನು ಅರಿತು ಮುನ್ನಡೆಯಬೇಕೆಂಬುದು ಅಪೇಕ್ಷಣೀಯ. ಈ ದಿಕ್ಕಿನಲ್ಲಿ ಶಿಕ್ಷಕರು ಬೋಧಕರಾಗಿ ಹಾಗೂ ಮಾರ್ಗದರ್ಶಕರಾಗಿ ಕಲಿಯುವ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಗಳಾಗಿ ರೂಪಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ವಿಶಿಷ್ಟ ಕೊಡುಗೆ ನೀಡುವ ಮೂಲಕ ಶಿಕ್ಷಕ ವೃತ್ತಿಗೆ ಸಾರ್ಥಕತೆ ತಂದು ಕೊಡಬೇಕೆಂದು ವಿನಂತಿಸಿದರು.

ಶಿಕ್ಷಕರು ಬೋಧನೆಯ ಜೊತೆಗೆ ಮಾರ್ಗದರ್ಶಕರಾಗಿ ಸತ್ಯಾನ್ವೇಷಣೆಯುತ್ತ ಮಕ್ಕಳನ್ನು ಉತ್ತೇಜಿಸುವ ತತ್ವಜ್ಞಾನಿಗಳಾಗಿ ಸಮತೂಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಣವು ವ್ಯಕ್ತಿ ಮತ್ತು ಸಮಾಜ ಪರಿವರ್ತನೆಯ ಒಂದು ಶಕ್ತಿಯುತ ಸಾಧನವಾಗಿದ್ದು, ಪುಸ್ತಕ, ಲೇಖನಿ ಹಾಗೂ ತರಗತಿ ಕಲಿಕೆಯ ಪ್ರಾಮುಖ್ಯತೆ ಅರಿಯುವಂತಾಗಬೇಕು ಎಂದು ಕರೆ ನೀಡಿದರು.

ನಿರಂತರ ಅಧ್ಯಯನಶೀಲರಾಗಿ

ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ ಮಾತನಾಡಿ, ಮಕ್ಕಳ ಓದು-ಬರಹದಲ್ಲಿ ಆಸಕ್ತಿ ಮೂಡಿಸಿ ಅಧ್ಯಯನಶೀಲ ಕೌಶಲಗಳು ಹಾಗೂ ವಿಷಯ ನಿರೂಪಣಾ ಶೈಲಿಯಲ್ಲಿ ಪರಿಣಿತಿ ಬೆಳೆಸಿಕೊಳ್ಳುವುದರಿಂದ ಕಾಲೇಜು ಹಂತದಲ್ಲಿ ಸ್ವಯಂ ಅಧ್ಯಯನ ಸಾಮರ್ಥ್ಯ ಗಳಿಸಿಕೊಳ್ಳುತ್ತಾರೆ. ಆದ್ದರಿಂದ ಪಠ್ಯಪುಸ್ತಕಗಳು, ಪೂರಕ ಪುಸ್ತಕಗಳು, ದಿನಪತ್ರಿಕೆ ಹಾಗೂ ನಿಯತ ಕಾಲಿಕೆಗಳನ್ನು ಓದುವ ಸಾಮರ್ಥ್ಯ ಬೆಳೆಸಬೇಕು. ನಿರಂತರ ಅಧ್ಯಯನಶೀಲತೆ, ಅಧ್ಯಾಪನ ಮತ್ತು ಚಿಂತನ ಮಂಥನಗಳಿಂದ ಶಿಕ್ಷಕ ಸಮುದಾಯ ಅಕಾಡೆಮಿಕ್ ಉನ್ನತಿಯನ್ನು ಸಾಧಿಸಬೇಕು ಎಂದರು.

ಈ ವೇಳೆ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ಬಗ್ಗೆ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ನವೀನ್ ಸೈಮನ್, ಡಾ.ಗೋಫಿನಾಥ್, ಡಾ.ಸುರೇಶ್, ನರೇಶ್, ಪ್ರೊ. ಡಯಾನ, ಆಯಿಶಾ, ಆಡಳಿತಾಧಿಕಾರಿಗಳಾದ ಕೆನಿತ್, ಶರವಣ,ಶಾಂತಾ ವಿದ್ಯಾನಿಕೇತನ ಹಾಗೂ ಶಾಂತಾ ಆರೋಗ್ಯ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಬೋಧಕರು ಇದ್ದರು.