ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ವಾಲ್ಮೀಕಿ ಸಮುದಾಯವು ಸಕಲ ರೀತಿಯಿಂದ ಅಭಿವೃದ್ಧಿಯಾಗಲು ಶಿಕ್ಷಣವೇ ಪ್ರಬಲ ಅಸ್ತ್ರವಾಗಿದೆ ಎಂದು ಉಪನ್ಯಾಸಕ ಸಣ್ಣಿಕೆಪ್ಪ ಕೊಂಡೇಕರ್ ಹೇಳಿದರು.ತಾಲೂಕು ಆಡಳಿತದಿಂದ ತಹಸೀಲ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪಾರ ಜ್ಞಾನದಿಂದ ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಗ್ರಂಥವನ್ನು ರಚಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂಥವರ ಜೀವನಾದರ್ಶಗಳು, ಬೋಧನೆಗಳನ್ನು ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಮಾಲಿಪಾಟೀಲ ಮಾತನಾಡಿ, ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಿಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತದ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ಅನೇಕ ಭಾಷೆಗಳಲ್ಲಿ ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಗಿದೆ. ಹೀಗಾಗಿ ಸಂಸ್ಕಾರ-ಶಿಕ್ಷಣದ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಮಾಜವು ಸದೃಢವಾಗಬೇಕು ಎಂದು ತಿಳಿಸಿದರು.ತಹಸೀಲ್ದಾರ್ ಎಂ.ಬಸವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿ ತತ್ವಾದರ್ಶಗಳೊಂದಿಗೆ ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ಸಮಾಜದ ಗುರು ಹುಲಕಲ್ ಪ್ರಾಸ್ತಾವಿಕ ಮಾತನಾಡಿ, ಆರ್ಥಿಕವಾಗಿ ಬಲವರ್ಧನೆ ಹೊಂದಲು ಸಮಾಜವು ಮೌಢ್ಯತೆಯಿಂದ ಹೊರಬರಬೇಕು. ದೇವರಲ್ಲಿ ಭಕ್ತಿ ಇರಲಿ, ಆದರೆ ಹೆಸರಿನಲ್ಲಿ ಮೂಡನಂಬಿಕೆ ಆಚಾರ ಕೈಬಿಡಬೇಕು ಎಂದು ಸಲಹೆ ನೀಡಿದರು.ವೀರಗೋಟದ ಪೂಜ್ಯ ಅಡವಿಲಿಂಗ ಮಹಾರಾಜ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಾಲ್ಮೀಕಿ ಜನಾಂಗವು ಭಕ್ತಿ-ಭಾವನೆಗಳಿಂದ, ಸುಸಂಸ್ಕೃತವಾಗಿ ಬದುಕು ನಡೆಸುವ ಸಮಾಜವಾಗಿರಬೇಕು. ಮಹರ್ಷಿ ವಾಲ್ಮೀಕಿ ಹಾಗೂ ಬೇಡರ ಕಣ್ಣಪ್ಪ ಅವರ ಬೋಧನೆಗಳು ಪ್ರೇರಣೆಯಾಗಿ ಸತ್ಯ ಮತ್ತು ಉತ್ತಮ ಮಾರ್ಗದಲ್ಲಿ ನಡೆಯುವಂತಾಗಲಿ ಎಂದು ಹಾರೈಸಿದರು.
ಈ ವೇಳೆ ವಿವಿಧ ಸಾಧಕರಾದ ಪತ್ರಕರ್ತ ಭೀಮನಗೌಡ ಬಿರಾದಾರ, ಲಕ್ಷ್ಮೀ ಚಂದ್ರಶೇಖರ್, ಹುಚ್ಚಪ ದೊರೆ, ತಿಪ್ಪಣ್ಣ ದೊರೆ ಶ್ರೀನಿವಾಸಪುರ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ :
ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಬಸವೇಶ್ವರ ವೃತ್ತದವರೆಗೂ ಡೊಳ್ಳು, ಕೋಲಾಟ, ಡಿಜೆಯೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ವೆಂಕಟೇಶ್ ಸ್ವಾಗತಿಸಿದರು. ಶಿಕ್ಷಕ ಭೀಮಣ್ಣ ವಾಲ್ಮೀಕಿ ನಿರೂಪಿಸಿದರು. ಅರವಿಂದ್ ಖಂಡೇಕರ್ ವಂದಿಸಿದರು.ಸಮಾಜದ ಮುಖಂಡ ಸಿದ್ದನಗೌಡ ಪೊ.ಪಾಟೀಲ್ ಕರಿಭಾವಿ, ಪ.ಪಂ.ಅಧ್ಯಕ್ಷ ತಿಪ್ಪಣ್ಣ ನಾಯ್ಕ, ತಾ.ಪಂ.ಇಒ ಬಸಣ್ಣ ನಾಯಕ, ಪಟ್ಟಣ ಪಂಚಾಯತ್ ಸದಸ್ಯ ಮಲ್ಲು ಹೆಬ್ಬಾಳ ಡಾ. ಮಹಿಬೂಬ್ ಸಾಹೇಬ ಖಾಜಿ, ರಾಠೋಡ, ಪಿಎಸೈ ಭಾಗಣ್ಣ, ದೇವಿಂದ್ರಪ್ಪ ಬಳಿಚಕ್ರ, ಭೀಮನಗೌಡ ಬೈಲಾಪುರ ಸೇರಿದಂತೆ ವಿವಿಧ ಮುಖಂಡರು ಇದ್ದರು.