ಸಾರಾಂಶ
- ರಾಷ್ಟ್ರೀಯ ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಕೃತಿ ಬಿಡುಗಡೆ- - - ಕನ್ನಡಪ್ರಭ ವಾರ್ತೆ ಹರಿಹರ
ಬಿರುಗಾಳಿಯಷ್ಟು ಶಕ್ತಿ ಹೊಂದಿರುವ ಶಿಕ್ಷಣ ಸಾಮಾಜಿಕ ಬದಲಾವಣೆಗೆ ಅವಶ್ಯಕವಾದ ಅಸ್ತ್ರವಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಬಾತಿ ಬಸವರಾಜ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ವಿದ್ಯೆ ಅಮೃತಕ್ಕೆ ಸಮಾನವಾದದ್ದು, ಸಮಾಜದಲ್ಲಿ ಕ್ರಾಂತಿ ಸೃಷ್ಟಿಸುವ ಶಕ್ತಿ ಇರುವ ವಿದ್ಯೆ ಪಸರಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಪುಸ್ತಕ ಮತ್ತು ವಿದ್ಯಾರ್ಥಿಗಳೇ ಅಧ್ಯಾಪಕನಿಗೆ ಆಸ್ತಿ. ಬೋಧನಾ ಕಾರ್ಯನಿರ್ವಹಿಸುವವರಿಗೆ ಐತಿಹಾಸಿಕ ಪ್ರಜ್ಞೆ ಬಹಳ ಮುಖ್ಯ. ಶಿಕ್ಷಕ ಸಂಸ್ಥೆಯಿಂದಷ್ಟೇ ನಿವೃತ್ತಿ, ಅಧ್ಯಾಪನದಿಂದ ಬಿಡುಗಡೆ ಇಲ್ಲ ಎಂದು ಗುರು ಸ್ಥಾನದ ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಗ್ರಾಮೀಣ ಭಾಗ ಮತ್ತು ಮಧ್ಯಮ ವರ್ಗದ ಜನಸಂಖ್ಯೆಗೆ ಈ ಕಾಲೇಜು ಸಾಕಷ್ಟು ಉತ್ತಮವಾದ ಕೋರ್ಸ್‍ಗಳೊಂದಿಗೆ, ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿನಲ್ಲಿ ನುರಿತ ಬೋಧಕ ವೃಂದ ಇದೆ ಎಂದರು.
ನಿವೃತ್ತಿ ಹೊಂದಿದ ಪ್ರಾಚಾರ್ಯ ಪ್ರೊ. ಎಚ್.ವಿರೂಪಾಕ್ಷಪ್ಪ ಮಾತನಾಡಿ, ವೃತ್ತಿನಿಷ್ಠೆ, ಪ್ರಮಾಣಿಕತೆ, ಕರ್ತವ್ಯ ಮತ್ತು ಸಮಯಪ್ರಜ್ಞೆ ಹೊಂದಿದ್ದರೆ ಅಧಿಕಾರ, ಸ್ಥಾನಮಾನ ತಾನಾಗಿಯೇ ಒಲಿಯುತ್ತದೆ. ಬೋಧನಾ ವೃತ್ತಿಯ ಜೀವನ ತೃಪ್ತಿದಾಯಕವಾಗಿದೆ. ನಿವೃತ್ತಿ ನಂತರವೂ ಶಿಕ್ಷಣ ಕ್ಷೇತ್ರಕ್ಕಾಗಿ ಶ್ರಮಿಸುವುದಾಗಿ ಎಂದು ಹೇಳಿದರು.ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಎಂ.ಎನ್. ರಮೇಶ್ ಮಾತನಾಡಿ, ಈ ಹಿಂದೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ ಪ್ರಾಂಶುಪಾಲರು, ಬೋಧಕರು ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ತಾವೂ ಅವರ ಮಾದರಿಯಲ್ಲೆ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಕನ್ನಡ ಪ್ರಾಧ್ಯಾಪಕ ಪ್ರೊ.ಅಂಜನಪ್ಪ, ಐಕ್ಯೂಎಸಿ ಸಂಯೋಜಕ ಪ್ರೊ.ಅನಂತನಾಗ್ ಎಚ್.ಪಿ., ದಾವಣಗೆರೆ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ.ರಾಜಕುಮಾರ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಾಬು ಕೆ.ಎ. ಹಾಗೂ ಹಿರಿಯ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.ವಿದ್ಯಾರ್ಥಿನಿ ಕು.ಅರ್ಪಿತಾ ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಎ.ರಾಜಪ್ಪ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಪ್ರೊ. ಎಸ್.ಆರ್. ಮಾಲತೇಶ್ ನಿರೂಪಿಸಿದರು, ಇತಿಹಾಸ ಅಧ್ಯಾಪಕ ಷಣ್ಮುಕಪ್ಪ ವಂದಿಸಿದರು.
- - - -01ಎಚ್‍ಆರ್‍ಆರ್03.ಜೆಪಿಜಿ:ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಕೃತಿ ಬಿಡುಗಡೆಗೊಳಿಸಲಾಯಿತು. ಶಾಸಕ ಬಿ.ಪಿ.ಹರೀಶ್, ಪ್ರೊ.ಬಾತಿ ಬಸವರಾಜ್ ಇದ್ದರು.