ಬಾಳೆಹೊನ್ನೂರು ಮನುಷ್ಯನ ಬದುಕಿನಲ್ಲಿ ಅವಿಭಾಜ್ಯ ಅಂಗವಾದ ಶಿಕ್ಷಣ ನಮ್ಮಲ್ಲಿ ಅಮೂಲಾಗ್ರ ಬದಲಾವಣೆ ತರಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮನುಷ್ಯನ ಬದುಕಿನಲ್ಲಿ ಅವಿಭಾಜ್ಯ ಅಂಗವಾದ ಶಿಕ್ಷಣ ನಮ್ಮಲ್ಲಿ ಅಮೂಲಾಗ್ರ ಬದಲಾವಣೆ ತರಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ನಿರ್ಮಲ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ಮಂಗಳವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಇಂದು ವಿಶ್ವದಲ್ಲಿ ವಿಜ್ಞಾನ, ತಂತ್ರಜ್ಞಾನ ನಾಗಾಲೋಟದಲ್ಲಿ ಓಡುತ್ತಿದ್ದು, ಪ್ರತಿ ಯೊಂದಕ್ಕೂ ಶಿಕ್ಷಣ ಅಗತ್ಯವಾಗಿ ಇರಬೇಕಿದೆ. ನಮ್ಮ ಬದುಕಿಗೆ ನಾವು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಲೇಬೇಕಿದ್ದು, ವಿಜ್ಞಾನ, ತಂತ್ರಜ್ಞಾನದೊಂದಿಗೆ ಎಐ ತಂತ್ರಜ್ಞಾನವೂ ಅತೀ ವೇಗವಾಗಿ ಬೆಳೆಯುತ್ತಿದೆ. ಇಂದು ನಾವು ಯಾವುದೇ ಉದ್ಯೋಗ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕಾಗಿದೆ. ಇದಕ್ಕಾಗಿ ಕಂಪ್ಯೂಟರ್ ಶಿಕ್ಷಣವೂ ಬೇಕಿದೆ.

ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ.38ರಷ್ಟು ಕೊಡುಗೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿವೆ. ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗುತ್ತಿರುವ ಕಾರಣ ಸರ್ಕಾರ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಸಹ ಬಿಸಿಯೂಟ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಕ್ಷೇತ್ರಾದ್ಯಂತ ಶಿಕ್ಷಣ ಕ್ಷೇತ್ರ ಬಲಪಡಿಸಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಯೊಂದಿಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ನೀಡುತ್ತಿದ್ದು, ಶೌಚಾಲಯ, ಕ್ರೀಡಾಂಗಣ, ಕೊಠಡಿಗಳ ನಿರ್ಮಾಣಕ್ಕೆ ಸಹಕಾರ ಕೊಡಲಾಗುತ್ತಿದೆ.ಇಂದು ಕೆಲವು ಕಡೆಗಳಲ್ಲಿ ರಾಜಕೀಯ ಲಾಭಕ್ಕಾಗಿ ಧರ್ಮಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು, ಇದು ದೇಶದ ಬೆಳವಣಿಗೆಗೆ ಮಾರಕ. ಭಾರತವು ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.ಮಂಗಳೂರು ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಫಿಲೋಮಿನ ನೊರೊನ್ಹ, ಉಪ ಕಾರ್ಯದರ್ಶಿ ಜೆಸಿಂತ ಪಿರೇರಾ, ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜ, ಎನ್.ಆರ್.ಪುರ ಬಿಇಒ ಶಬನಾ ಅಂಜುಮ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಸದಸ್ಯರಾದ ಸರಿತಾ, ಶಿವಪ್ಪ, ಶಾಲಾ ಪೋಷಕ ಸಂಘದ ಉಪಾಧ್ಯಕ್ಷ ಸಿ.ಎ. ಶ್ರೀಧರ್, ಗಿರೀಶ್ ಕಾರ್‌ಗದ್ದೆ, ನಿರ್ಮಲ ಕಾನ್ವೆಂಟ್ ಮುಖ್ಯಶಿಕ್ಷಕಿ ಲಿಲ್ಲಿ ಡಿಸೋಜಾ, ಸಂಚಾಲಕಿ ಐರಿನ್ ವೇಗಸ್ ಮತ್ತಿತರರು ಹಾಜರಿದ್ದರು.೦೩ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ನಿರ್ಮಲ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜ ಉದ್ಘಾಟಿಸಿದರು. ಶಾಸಕ ಟಿ.ಡಿ.ರಾಜೇಗೌಡ, ಫಿಲೋಮಿನ ನೊರೊನ್ಹ, ಜೆಸಿಂತ ಪಿರೇರಾ, ರವಿಚಂದ್ರ, ಸರಿತಾ, ಶಿವಪ್ಪ ಇದ್ದರು.