ಶಿಕ್ಷಣ ಸ್ವಾತಂತ್ರ್ಯವನ್ನು ತಂದುಕೊಡಬೇಕು. ಗುಲಾಮಗಿರಿಯಿಂದ ಮುಕ್ತಗೊಳ್ಳುವಂತೆ ಮಾಡುವುದೇ ಶಿಕ್ಷಣ ಎಂದು ಗಾಂಧೀಜಿಯವರು ನಂಬಿದ್ದರು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಎರಡಕ್ಕೂ ಪ್ರಾಧಾನ್ಯತೆ ಇದೆ. ಲೌಕಿಕ ಶಿಕ್ಷಣ ಅನ್ನವನ್ನು ಸಂಪಾದಿಸುವುದನ್ನು ಹೇಳಿಕೊಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಶಿಕ್ಷಣ ಒಳ್ಳೆಯ ಆಲೋಚನೆಗಳನ್ನು ಬೆಳೆಸಬೇಕು. ಉತ್ತಮ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣದ ಅವಶ್ಯಕತೆ ತುಂಬಾ ಇದೆ ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ವೂಡೇ ಪಿ. ಕೃಷ್ಣ ತಿಳಿಸಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ 18ನೇ ಪದವೀಧರರ ದಿನಾಚರಣೆಯಲ್ಲಿ ಪದಕ ಹಾಗೂ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೊಡ್ಡದಾಗಿ ಯೋಜಿಸಿ, ದೊಡ್ಡದಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕು. ಕಲಿಕೆಯು ಕೇವಲ ಪದವಿಗೆ ಸೀಮಿತವಾಗಬಾರದು. ಕಲಿಕೆಯಲ್ಲಿ ನಿರಂತರತೆ ಇರಬೇಕು. ಕ್ಷಣ ಕ್ಷಣವೂ ಕಲಿಯುವುದು ನಿಜವಾದ ಶಿಕ್ಷಣ ಎಂದರು.

ಶಿಕ್ಷಣ ಸ್ವಾತಂತ್ರ್ಯವನ್ನು ತಂದುಕೊಡಬೇಕು. ಗುಲಾಮಗಿರಿಯಿಂದ ಮುಕ್ತಗೊಳ್ಳುವಂತೆ ಮಾಡುವುದೇ ಶಿಕ್ಷಣ ಎಂದು ಗಾಂಧೀಜಿಯವರು ನಂಬಿದ್ದರು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಎರಡಕ್ಕೂ ಪ್ರಾಧಾನ್ಯತೆ ಇದೆ. ಲೌಕಿಕ ಶಿಕ್ಷಣ ಅನ್ನವನ್ನು ಸಂಪಾದಿಸುವುದನ್ನು ಹೇಳಿಕೊಡುತ್ತದೆ. ಇದು ಬಹಿರಂಗ ಜೀವನಕ್ಕೆ ಸಂಬಂಧಿಸಿದ್ದು. ಅಧ್ಯಾತ್ಮ ಶಿಕ್ಷಣ ಅಂತರಂಗಕ್ಕೆ ಸಂಬಂಧಿಸಿದ್ದು, ನಾವು ನೀಡುವ ಮತ್ತು ಪಡೆಯುವ ಶಿಕ್ಷಣ ಉತ್ತಮವಾದ ಹೊರ ನೋಟ ಮತ್ತು ಒಳನೋಟಗಳನ್ನು ನೀಡುವಂತೆ ಇರಬೇಕು. ಇಂದಿನ ಬದುಕನ್ನು ಸಮತೋಲನದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಇದು ಅಗತ್ಯವಾಗಿದೆ ಎಂದರು.

ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇಂದು ಕೌಶಲ್ಯಗಳನ್ನು ನಿರಂತರವಾಗಿ ಕಲಿತು ಕಾಲಕಾಲಕ್ಕೆ ಅವುಗಳನ್ನು ಉನ್ನತೀಕರಿಸಿಕೊಳ್ಳಬೇಕು. ಇಷ್ಟವಿಲ್ಲದವರ ನಡುವೆ ನಾವು ಬದುಕುವುದನ್ನು ಇಂದು ಕಲಿಯಬೇಕಿದೆ. ಮೌಲ್ಯಗಳನ್ನು ರೂಢಿಸಿಕೊಳ್ಳದೆ ಯಶಸ್ಸನ್ನು ಸಾಧಿಸಲಾಗದು. ಸರಳವಾದ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ. ನಾವು ನಮ್ಮದಲ್ಲದ ಜೀವನವನ್ನು ಅಪ್ಪಿಕೊಳ್ಳಬಾರದು.

998 ವಿದ್ಯಾರ್ಥಿಗಳಿಗೆ ಪದವಿ:

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಅವರು, ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಿಂದ ಒಟ್ಟು 998 ವಿದ್ಯಾರ್ಥಿಗಳು ಪದವೀಧರರಾದರು. ಇವರಲ್ಲಿ ಹೆಚ್ಚು ಅಂಕ ಪಡೆದ ಒಟ್ಟು 66 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. 16 ವಿದ್ಯಾರ್ಥಿಗಳು ವಿವಿಧ ದತ್ತಿ ಪುರಸ್ಕಾರಕ್ಕೆ ಪಾತ್ರರಾದರು.

ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ. ಪ್ರಭುಸ್ವಾಮಿ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಸ್ವಾಗತಿಸಿದರು. ಅದಿತಿ ಹೆಗ್ಡೆ ಮತ್ತು ಸಾನ್ನಿಧ್ಯ ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ.ಎಂ. ಪ್ರಭು ವಂದಿಸಿದರು. ಡಾ.ಎನ್. ರಾಜೇಂದ್ರಪ್ರಸಾದ್‌ ನಿರೂಪಿಸಿದರು.